ಸಿಎಂ ತವರು ಜಿಲ್ಲೆಯ ಸಚಿವರು ಶಾಸಕರನ್ನು ಭೇಟಿ ಮಾಡಿದ ಸತೀಶ್ ಜಾರಕಿಹೊಳಿ

ಮೈಸೂರು: ಮೈಸೂರಿಗೆ ತಾವು ಭೇಟಿ ನೀಡಿರುವುದರ ಹಿಂದೆ‌ ಯಾವುದೇ ಮಹತ್ವದ ವಿಚಾರ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮೈಸೂರಿಗೆ ಆಗಮಿಸಿರುವ ಅವರು,ಜಿಲ್ಲೆಯ ಸಚಿವರು,ಶಾಸಕರನ್ನು ಭೇಟಿ ಮಾಡಿದ್ದು ಚರ್ಚೆಗೆ ಗ್ರಾಸ‌ ಒದಗಿಸಿದೆ.

ಆದರೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಮೈಸೂರು ದಸರಾ ಫೇಮಸ್ ಅಲ್ವಾ ಹಾಗಾಗಿ ಮೈಸೂರಿನಲ್ಲಿ ಓಡಾಡಿಕೊಂಡು ದಸರಾ ನೋಡುತ್ತೇನೆ‌ ಅದು ಬಿಟ್ಟರೆ ಬೇರೆ ಯಾವ‌ ಮಹತ್ವವೂ ಇಲ್ಲ ಎಂದು ತಿಳಿಸಿದರು.

ಸಚಿವ ಮಹದೇವಪ್ಪ ಅವರನ್ನ ಭೇಟಿ ಮಾಡಿದ್ದೇನೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು ಎಂದರು.

ಸಿದ್ದರಾಮಯ್ಯನವರೇ ಮುಖ್ಯ ಮಂತ್ರಿ ಆಗಿ ಇರುತ್ತಾರೆ.ಆದರೆ 5 ವರ್ಷಾನೊ ಮೂರು ವರ್ಷವೂ ಗೊತ್ತಿಲ್ಲ. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ,ಹಾಗಾಗಿ ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು
ಹೇಳಿದರು.

ನಮ್ಮಲ್ಲಿ ಎಲ್ಲೂ ಸಿಎಂ ಬದಲಾವಣೆ ಚರ್ಚೆಗಳು ನಡೆದೇ ಇಲ್ಲ, ಸಿಎಂ ಜೊತೆ ನಾನು ಸಚಿವನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ನೀವೆ ಸಿಎಂ‌ ಎಂದು ವಿಪಕ್ಷ ನಾಯಕರು ಹೇಳುತ್ತಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಪಕ್ಷದವರು ಪ್ರೀತಿಯಿಂದ ನನ್ನ ಹೆಸರು ಹೇಳುತ್ತಿದ್ದಾರೆ ಅಷ್ಟೇ, ನಮ್ಮಲ್ಲಿ ಯಾವುದೇ ಚರ್ಚೆನೂ ಆಗಿಲ್ಲ, ಬೆಳವಣಿಗೆಯೂ ನಡೆದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಸಮಾರಂಭದ ಸಂದರ್ಭದಲ್ಲಿ ಬೆಂಬಲಿಗರು ಸಿಎಂ ಎಂದು ಜೈಕಾರ ಹಾಕುವುದು ಸಾಮಾನ್ಯ,ಹಾಗಂತ ಏನೋ ಬದಲಾವಣೆ ಆಗುತ್ತೆ ಅಂತ ಹೇಳೋದು ಸರಿಯಲ್ಲ ಎಂದು ಸಚಿವರು ಹೇಳಿದರು.