ಮೈಸೂರು: ಲೋಕಾಯುಕ್ತ ಪೊಲೀಸರು ಮೂಡಾ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಮೂಡಾ ಪ್ರಕರಣದ ಎ 3 ಆರೋಪಿ ಮಲ್ಲಿಕಾರ್ಜುನ ಹಾಗೂ ಎ 4 ಆರೋಪಿ ದೇವರಾಜು ಅವರಿಗೆ ನೋಟಿಸ್ ನೀಡಿ ಅ.10 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ದೂರುದಾರ ಸ್ನೇಹಮಯಿ ಕೃಷ್ಣ ಅವರ ವಿಚಾರಣೆಯನ್ನು ನಡೆಸಿದ್ದಾರೆ.
ಮೈಸೂರಿನ ಕೆಸರೇ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಹಾಗೆಯೇ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ನೀಡಲಾಗಿರುವ 14 ಸೈಟ್ ಗಳಿರುವ ವಿಜಯನಗರಕ್ಕೂ ಭೇಟಿ ನೀಡಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇದೀಗ ಈ ಪ್ರಕರಣದ ಆರೋಪಿಗಳಾದ ಎ 3 ಹಾಗೂ ಎ 4 ಮಲ್ಲಿಕಾರ್ಜುನ ಮತ್ತು ದೇವರಾಜು ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ನ್ಯಾಯಾಲಯ ಡಿಸೆಂಬರ್ ಒಳಗೆ ಮೂಡಾ ಪ್ರಕರಣದ ತನಿಖೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎ1 ಆರೋಪಿ ಮತ್ತು ಅವರ ಪತ್ನಿ ಪಾರ್ವತಿ ಎ 2 ಆರೋಪಿ ಆಗಿದ್ದಾರೆ. ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿ ಯಾವ ರೀತಿ ವಿಚಾರಣೆ ನಡೆಸಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.