ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಜಿ. ಪರಮೇಶ್ವರ್

ಮೈಸೂರು: ಮುಖ್ಯ ಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಸಿದ್ದರಾಮಯ್ಯ ಅವರೇ‌ ಸಿಎಂ‌ ಆಗಿ ಮುಂದುವರಿಯಲಿದ್ದಾರೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಈ‌ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಮಹದೇವಪ್ಪ ಅವರ ಮನೆಯಲ್ಲಿ ಡಿನ್ನರ್ ಮಾಡಿದೆವು.ಆದರೆ ಯಾವ ಮೀಟಿಂಗ್ ಮಾಡಲಿಲ್ಲ ಎಂದು ‌ತಿಳಿಸಿದರು.

ಮಹದೇವಪ್ಪ ಮನೆಯಲ್ಲಿ ಡಿನ್ನರ್ ಅರೆಂಜ್ ಆಗಿತ್ತು, ಊಟಕ್ಕೆ ಹೋಗಿದ್ವಿ. ಮೈಸೂರಿನ ಆತಿಥ್ಯ ಬಿಡುವುದಕ್ಕೆ ಆಗುತ್ತಾ,ಹಾಗಂತ ಅದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದರು.

ಡಿನ್ನರ್ ನಲ್ಲಿ ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಶಾಸಕ ಎ.ಆರ್ ಕೃಷ್ಣ ಮೂರ್ತಿ ಇದ್ದೆವು,ಆದರೆ ಯಾವುದೇ ರಾಜಕೀಯ ಚರ್ಚೆ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಬದಲಾವಣೆಯೂ ಇಲ್ಲ, ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಅಗತ್ಯವೂ ಇಲ್ಲ, ನಾವು ಆಗಾಗಗ ಸೆರ್ತಾ ಇರ್ತಾ ಇರ್ತೀವಿ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

ದಲಿತ ಸಿಎಂ ಚರ್ಚೆ ವಿಚಾರ‌ ಕುರಿತು ಯಾವುದೇ ಚರ್ಚೆ ಮಾಡಿಲ್ಲ ಎಂದರು.

ನಿಮಗೆ ಸಿಎಂ ಅಗುವ ಆಸೆ ಇಲ್ವಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅದರ ಪ್ರಶ್ನೆಯೇ ಅನಗತ್ಯ ಎಂದು ಉತ್ತರಿಸಿದರು.

ಹರಿಯಾಣ ಸೋಲಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಮುಡಾ ಹಗರಣ ಮೈಸೂರಿನ ಬಹಳಷ್ಟು ಜನರಿಗೆ ಗೊತ್ತಿಲ್ಲ,ಇನ್ನು ಹರಿಯಾಣ‌ ಜನರಿಗೆ ಗೊತ್ತಿರುತ್ತಾ, ಕೋಳಿವಾಡ ಅವರ ಹೇಳಿಕೆ ವೈಯಕ್ತಿಕವಾದುದು ಎಂದು ತಿಳಿಸಿದರು.

ಜಾತಿ ಗಣತಿ ವರದಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, 18ರಂದು ಸಂಪುಟದ ಮುಂದೆ ಇಡ್ತೀನಿ ಎಂದು ಸಿಎಂ ಹೇಳಿದ್ದಾರೆ. ಅಲ್ಲಿ ಚರ್ಚೆ ಮಾಡಲಾಗುತ್ತದೆ, ವರದಿ ಬಿಡುಗಡೆ ಬಗ್ಗೆ ಸಚಿವ ಸಂಪುಟ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.