ಬಿಂದಾಸ್ ಬಾಲಿವುಡ್ ನೈಟ್ ನಲ್ಲಿ ಜನಸಾಗರ

ಮೈಸೂರು: ಉತ್ತನಹಳ್ಳಿಯ ಹೊರ ವಲಯದಲ್ಲಿ ಆಯೋಜಿಸಿರುವ ಯುವ ದಸರಾದಲ್ಲಿ ಬಿಂದಾಸ್ ಬಾಲಿವುಡ್ ನೈಟ್ ಗೆ ಜನ ಸಾಗರವೇ ಹರಿದು ಬಂದಿತ್ತು.

ಕಾರ್ಯಕ್ರಮದ ಉದ್ದಕ್ಕೂ ವಿವಿಧ ಚಿತ್ರಗಳ ಗಾಯನಗಳಿಗೆ ನೃತ್ಯ ಮಾಡುವುದರ ಮೂಲಕ ಗಾಯಕರು ಎಲ್ಲರ ಮನ ಸೆಳೆದರು.

ಬಾಲಿವುಡ್ ಖ್ಯಾತ ಗಾಯಕ ಬಾದ್ ಶಾ ಅವರು ವೇದಿಕೆ ಮೇಲೇರುತ್ತಿದ್ದಂತೆ  ಪ್ರೋಪಪಾ ರೋಲ ಎಂದು ಡಿಜೆ ಬೀಟ್ಸ್ ನೊಂದಿಗೆ ರ್‍ಯಾಂಪ್ ಮಾಡುವ ಮೂಲಕ ಯುವ ಜನರು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಕನ್ನಡದಲ್ಲಿ ಮಾತನಾಡಿದ ಬಾದ್ ಶಾ, ನಾನು ಗಾಯಕನಲ್ಲ ನಾನೊಬ್ಬ ಬರಹಗಾರ ನನ್ನ ಭಾವನೆಯನ್ನು ಬರೆದು ಹಾಡುತ್ತೇನೆ ಎಂದು ‌ಹೇಳಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ನೀನೇ ರಾಜ ಕುಮಾರ ಗೀತೆಯ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕಲಾವಿದ ಬಾದ್ ಶಾ ಗೌರವ ಸಮರ್ಪಣೆ ಮಾಡಿದರು.ಈ ವೇಳೆ ಇಡೀ ಜನಸಮೂಹ ಕ್ಯಾಂಡಲ್ ಬೆಳಗಿ ಅಪ್ಪೂಗೆ ಗೌರವ ಸಲ್ಲಿಸಿದರು.

ಸರಿಗಮಪ ಖ್ಯಾತಿಯ ಜಸ್ ಕರಣ್ ಸಿಂಗ್ ಅವರು ಮರುಭೂಮಿ ನಡುವೆ, ಜಗವೇ ನೀನು ಗೆಳತಿಯೇ  ಎಂದು ಆರಂಭಿಸಿ ತಮ್ಮ ಇಂಪಾದ ಧ್ವನಿಯ ಮೂಲಕ ಮೈಸೂರು ಜನರಿಗೆ ರಸ ಸಂಜೆಯನ್ನು ಉಣ ಬಡಿಸಿದರು.

ಮೈಸೂರಿನ ಹಿನ್ನೆಲೆ ಗಾಯಕಿ ಸಂಗೀತ ರವೀಂದ್ರನಾಥ್ ಅವರು, ಬೆಳಕಿನ ಕವಿತೆ ಬೆಳಗಿಗೆ ಸೋತೆ ಎಂದು ಹಾಡುತ್ತಾ ಯುವಜನರ ಮನದಲ್ಲಿ ಪ್ರೇಮದ ಪುಳಕವನ್ನು ಹೆಚ್ಚಿಸಿದರು.

ವಾತ್ಸಲ್ಯ ಶಿಕ್ಷಣ ಮಹ ವಿದ್ಯಾಲಯವು ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಾದ ಅನ್ನ ಭಾಗ್ಯ, ಶಕ್ತಿ,ಯುವ ನಿಧಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ  ಯೋಜನೆಗಳ ಬಗ್ಗೆ ಹಾಗೂ ಸರ್ವ ಧರ್ಮ ಸಮಾನತೆಯನ್ನು ಸಾರುವ ಅಂಶವನ್ನು ಒಳಗೊಂಡ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಸಾಧನೆಯ ಕುರಿತು ರಚಿತವಾದ ಗೀತೆಗೆ ನೃತ್ಯ ಮಾಡಿದರು.

ಚಾಮರಾಜನಗರ ಕಲಾತಂಡವು ಜನಪದ ಸೊಗಡಿನ ಮಹದೇಶ್ವರನ ಗೀತೆಯ ಮೂಲಕ ಮಲೆ ಮಹದೇಶ್ವರನ ಮಹಿಮೆಯನ್ನು ಸಾರುವ ಜನಪದ ಗೀತೆಗೆ  ಕಂಸಾಳೆ ನೃತ್ಯವನ್ನು ಮಾಡಿದರು.

ಮಹಾರಾಣಿ ಮಹಿಳಾ ಕಾಲೇಜು, ಜೆ .ಎಸ್.ಎಸ್ ವಿದ್ಯಾರ್ಥಿಗಳ ಕಲಾತಂಡವು ನೃತ್ಯ ಮಾಡಿ ಜನರ ಮನಗೆದ್ದರು.