ಜಂಬೂ ಸವಾರಿ ಪುಷ್ಪಾರ್ಚನೆ ತಾಲೀಮು

ಮೈಸೂರು: ಜಂಬೂ ಸವಾರಿ ಮೆರವಣಿಗೆಗೆ ಅಕ್ಟೋಬರ್‌ 12ರ ಸಂಜೆ 4ರಿಂದ 4.30ರ ಶುಭ ಕುಂಭ ಲಗ್ನದಲ್ಲಿ ಗಣ್ಯರಿಂದ ಪುಷ್ಪಾರ್ಚನೆ ನಡೆಯಲಿದ್ದು ಇದಕ್ಕೆ ಪೂರ್ವಭಾವಿ ತಾಲೀಮು ನಡೆಯಿತು.

ಇಂದು ಬೆಳಗ್ಗೆ ಅರಮನೆ ಮುಂಭಾಗದಲ್ಲಿ ದಸರಾ ಜಂಬೂ ಸವಾರಿಯ ಪುಷ್ಪಾರ್ಚನೆಯ ತಾಲೀಮನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ನಡೆಸಿದವು.

ತಾಲೀಮಿನಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ಅಭಿಮನ್ಯು, ಹಾಗೂ ಕುಮ್ಕಿ ಆನೆಗಳಾದ ಹಿರಣ್ಯ ಮತ್ತು ಲಕ್ಷ್ಮೀ, ಅಶ್ವಾರೋಹಿ ದಳ, ಪೊಲೀಸ್‌ ಬ್ಯಾಂಡ್‌, ಪೊಲೀಸ್‌ ತುಕಡಿಗಳು ಭಾಗವಹಿಸಿದ್ದವು.

ಪುಷ್ಪಾರ್ಚನೆ ಮಾಡುವ ಸ್ಥಳದಿಂದ ಗಜಪಡೆ ಹಾಗೂ ಅಶ್ವಾರೋಹಿ ದಳದ ಜತೆಗೆ ಪೊಲೀಸ್‌ ಬ್ಯಾಂಡ್‌ ಸಾಗುವ ತಾಲೀಮು ಕೂಡಾ ನಡೆಯಿತು.

ಈ ವೇಳೆ ಡಿಸಿಎಫ್‌ ಡಾ.ಪ್ರಭುಗೌಡ ಮಾತನಾಡಿ, ನಾಡಹಬ್ಬ ದಸರಾ ನಿಮಿತ್ತ ಗಜಪಡೆಗೆ ಎಲ್ಲ ತಾಲೀಮು ಮುಗಿಸಲಾಗಿದ್ದು, ಕೊನೆಯ ಹಂತದ ಪುಷ್ಪಾರ್ಚನೆ ತಾಲೀಮನ್ನು ನಡೆಸಲಾಯಿತು. ಪುಷ್ಪಾರ್ಚನೆ ದಿನ ಯಾವ ರೀತಿ ಕ್ರಮವಾಗಿ ಮೆರವಣಿಗೆ ಸಾಗಬೇಕು ಎಂಬುದನ್ನು ಇವತ್ತು ತಾಲೀಮು ನಡೆಸಲಾಗಿದ್ದು, ನಿಶಾನೆ ಆನೆ ಧನಂಜಯ, ನೌಪಥ್‌ ಆನೆಯಾಗಿ ಗೋಪಿ ಸ್ವಲ್ಪವೂ ವಿಚಲಿತರಾಗದೇ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿದವು ಎಂದು ತಿಳಿಸಿದರು.

ಜಂಬೂ ಸವಾರಿಯ ದಿನ 9 ಆನೆಗಳು ಮಾತ್ರ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ತಾಲೀಮಿನಲ್ಲಿ ಅಂಬಾರಿ ಆನೆ ಮತ್ತು ಕುಮ್ಕಿ ಆನೆಗಳ ಸ್ಪಂದನೆ ಚೆನ್ನಾಗಿದೆ. ನಾಳೆ ಕೂಡ ತಾಲೀಮು ಇರುತ್ತದೆ. ಈಗಾಗಲೇ ಗಜಪಡೆಗೆ ಸಿಡಿಮದ್ದು ತಾಲೀಮು ಕೂಡಾ ನಡೆಸಲಾಗಿದೆ ಎಂದು ಹೇಳಿದರು.