ಮೈಸೂರು: ಮೈಸೂರಿನಲ್ಲಿ 1974 ರಲ್ಲಿ ನಾನು ಕಾರ್ಯಕ್ರಮವನ್ನು ನೀಡಲು ಬಂದಿದ್ದೆ, ಆಗಿನಿಂದಲೂ ಮೈಸೂರಿನ ಆತ್ಮೀಯತೆ ಇಷ್ಟವಾಯಿತು. ಹೀಗೆ ಸ್ಮರಿಸಿದವರು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು.
ಮೈಸೂರಿನ ಉತ್ತನಹಳ್ಳಿ ಬಳಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಅವರು ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ಆ ದಿನ ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು ಎಂದು ಹೇಳಿದರು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ನನ್ನನ್ನು ಮೈಸೂರಿಗೆ ಕರೆಸಿ ನಿಮ್ಮನ್ನು ನೋಡುವ ಅವಕಾಶ ದೊರಕಿದೆ ಎಂದು ಭಾವನಾತ್ಮಕವಾಗಿ ನುಡಿದರು.
ಕಾರ್ಯಕ್ರಮದ ನಂತರದಲ್ಲಿ ನೇರವಾಗಿ ಶಕ್ತಿ ದೇವತೆ ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿದೆ. ಅಲ್ಲಿನ ದೇವಿಯ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳೇ ಸಾಲದು. ಅಮ್ಮ ಎಂದು ಕೂಗಿದರೆ ಮೈ ನವಿರೇಳುವುದು ಎಂಬ ಗೀತೆಯ ಮೂಲಕ ದೇವಿ ಮೂಕಂಬಿಕೆಯನ್ನು ಆರಾಧಿಸಿದರು.
ನಾಡ ದೇವತೆ ಚಾಮುಂಡೇಶ್ವರಿಯ ಗೀತೆಯಾದ ಜನನಿ ಜಗನಿ ಎಂಬ ತಮಿಳು ಗೀತೆಯ ಮೂಲಕ ಗಾಯನವನ್ನು ಆರಂಭಿಸಿ ಕೇಳುಗರ ಮನಸಿಗೆ ಮುದ ನೀಡಿದರು.
ಓಂ ಶಿವೋಂ ಓಂ ಶಿವೋಂ ಗೀತೆಯ ಮೂಲಕ ಶಿವನ ಆರಾಧಿಸಿದ ಇಳಿಯರಾಜ ಅವರು ಎದೆ ಝಲ್ ಎನಿಸುವಂತೆ ಮಾಡಿದರು.
ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಮಗ ಎಸ್.ಪಿ ಚರಣ್ ಅವರ ಸುಮಧುರ ಧ್ವನಿಯಲ್ಲಿ ಅನಂತ್ ನಾಗ್ ಅವರ ಮಾತು ತಪ್ಪದ ಮಗ ಚಿತ್ರದ ಎಂತ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಕನ್ನಡ ನಾಡಿದು ಚಿನ್ನದ ಬೀಡಿದು ಎಂದು ಹಾಡುತ್ತಾ ಕನ್ನಡದ ಕಂಪನ್ನು ತುಂಬಿಸಿದರು.
ಶಂಕರ್ ನಾಗ್ ಅವರ ಗೀತಾ ಚಿತ್ರದ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಗೀತೆಯು ಕಂಪೋಸಿಂಗ್ ಸಂದರ್ಭದಲ್ಲಿ ನಡೆದ ವಿಚಾರವನ್ನು ಮರುಕಳಿಸಿ ಅದೇ ರೀತಿಯಲ್ಲಿ ಆ ಗೀತೆಯನ್ನು ಎಸ್.ಪಿ ಚರಣ್ ಅವರು ತಮ್ಮ ಧ್ವನಿಯಲ್ಲಿ ಮಧುರವಾದ ಇಂಪನ್ನು ನೀಡಿದರು.
ಡಾ. ರಾಜ್ ಕುಮಾರ್ ಅವರನ್ನು ನೆನೆದ ಚರಣ್ ಅವರು ಮೊದಲಿಗೆ ಹಾಡಿದ ಯಾರೇ ಕೂಗಾಡಲಿ ಊರೇ ಹೋರಾಡಲಿ ಗೀತೆಯನ್ನು ನೆನೆದು, ನನ್ನ ನಿನ್ನ ಗೆಲ್ಲಲಾರೆ ಚಿತ್ರದ ಗೀತೆಗೆ ಕುಣಿದು ಪ್ರಸ್ತುತ ಪಡಿಸಿದರು.
ಹಿನ್ನೆಲೆ ಗಾಯಕರಾದ ಶರತ್, ವಿಭಾರವಿ
ಗಾಯಕಿ ಶ್ವೇತಾ ಮೋಹನ್, ಹರಿ ಚರಣ್ ,ಗಾಯಕಿ ಅನನ್ಯ ಭಟ್ ಹೀಗೆ ಹಲವಾರು ಗಾಯಕರು ತಮ್ಮ ಸುಮಧುರ ಕಂಠದಿಂದ ಜನರನ್ನು ಮಂತ್ರ ಮುಗ್ದರನ್ನಾಗಿಸಿದರು.
ಸಂಗೀತ ಬರಹಗಾರರಾದ ವಿ. ಮನೋಹರ್ , ಕೆ ಕಲ್ಯಾಣ್ ಅವರೂ ಕೂಡಾ ಇದೇ ವೇಳೆ ಇಳಯರಾಜಾ ಅವರ ಜೊತೆಯ ಅನುಭವವನ್ನು ಹಂಚಿಕೊಂಡರು.