ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಯನ್ನು ಪ್ರತ್ಯಕ್ಷ,ಪರೋಕ್ಷವಾಗಿ ಕೋಟ್ಯಂತರ ಮಂದಿ ಕಣ್ ತುಂಬಿಕೊಂಡರು.
750 ಕೆ ಜಿ ತೂಕದ ಚಿನ್ನದ ಅಂಬಾರಿ ಒಳಗೆ ವಿರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಕ್ಯಾಪ್ಟನ್ ಅಭಿಮನ್ಯು ಆನೆ ರಾಜ ಗಾಂಭಿರ್ಯದಿಂದ ಹೆಜ್ಜೆ ಹಾಕಿದನು.
ಸಂಜೆ ಶುಭ ಕುಂಭ ಲಗ್ನ 5 ಗಂಟೆಗೆ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇ ಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹ ದೇವಪ್ಪ,ಸಚಿವ ಶಿವರಾಜ ತಂಗಡಗಿ,ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ,ಮೈಸೂರು ನಗರ ಕಮಿಷನರ್ ಸೀಮಾ ಲಾಟ್ಕರ್ ಅವರು ಕೂಡಾ ತಾಯಿಗೆ ಪುಷ್ಪ ನಮನ ಸಲ್ಲಿಸಿದರು.
ಜಂಬೂಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕ ಬಳಿಕ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಸಾಗಿದರೆ, ಲಕ್ಷ್ಮೀ ಮತ್ತು ಹಿರಣ್ಯ ಕುಮ್ಕಿ ಆನೆಗಳು ಸಾಥ್ ನೀಡಿದವು.ಅಂಬಾರಿ ಹೊತ್ತ ಅಭಿಮನ್ಯುವಿನ ಮುಂದೆ ಉಳಿದ ಗಜಪಡೆ ಸಾಗಿತು.
ರಸ್ತೆಯುದ್ದಕ್ಕೂ ಕಿಕ್ಕಿರಿದು ತುಂಬಿದ್ದ ಜನತೆ ತಾಯಿ ಚಾಮುಂಡೇಶ್ವರಿ ದೇವಿಗೆ ಜಯಕಾರ ಹಾಕುತ್ತಿದ್ದರು.
ಮರಗಳ ಮೇಲೆ,ಕಟ್ಟಡಗಳ ಮೆಲೆ ಕೂಡಾ ಯುವಕರು ಕುಳಿತು ಶಿಳ್ಳೆ,ಚಪ್ಪಾಳೆ ಹೊಡೆಯುತ್ತಾ ಜಂಬೂಸವಾರಿ ವೀಕ್ಷಿಸಿದರು.
ಸುಮಾರು 5 ಕಿಲೋ ಮೀಟರ್ ವರೆಗೆ ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ತಾಯಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಕ್ರಮಿಸಿದ ಅಭಿಮನ್ಯು ರಾತ್ರಿ ಸುಮಾರು 7.45 ರ ವೇಳೆಗೆ ಬನ್ನಿಮಂಟಪ ತಲುಪುವ ಮೂಲಕ ಇತಿಹಾಸ ಪ್ರಸಿದ್ಧ ಜಂಬೂಸವಾರಿ ಮೆರವಣಿಗೆ ಸಂಪನ್ನಗೊಂಡಿತು.