ಹುಬ್ಬಳ್ಳಿ ಗಲಭೆ:ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯಲ್ಲ- ಪರಮೇಶ್ವರ್‌

ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ. ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯಲ್ಲ. ನಿಯಮಾನುಸಾರವೆ ವಾಪಸ್ ಪಡೆಯುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ಸುಳ್ಳು ಕೇಸು ಗಳನ್ನು ಹಾಕಿದ್ದರೆ ಪರಿಶೀಲಿಸಿ ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶ ಇದೆ. ಯಾರೋ ಹೇಳಿದ್ದಾರೆ ಅಂತ ಕೇಸ್ ವಾಪಸ್ ಪಡೆಯಲ್ಲ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಮಾಡುತ್ತೇವೆ. ಇದರಲ್ಲಿ ಕೇವಲ ಅಲ್ಪಸಂಖ್ಯಾತರಷ್ಟೇ ಇಲ್ಲ, ವಿದ್ಯಾರ್ಥಿಗಳು, ರೈತರು ಇದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್‌ಗಳನ್ನೂ ಪರಿಶೀಲನೆ ಮಾಡುತ್ತೇವೆ. ಕಣ್ಮುಚ್ಚಿಕೊಂಡು ಯಾವುದೇ ಕೇಸ್ ವಾಪಸ್ ಪಡೆಯುವುದಿಲ್ಲ ನಿಯಮಾನುಸಾರ ವಾಪಸ್ ಪದೆಯುತ್ತೇವೆ ಎಂದು ಹೇಳಿದರು.

ಹುಬ್ಬಳ್ಳಿ ಗಲಭೆ ಕೇಸ್‌ಗಳು ವಾಪಸ್ ಪಡೆಯುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಕೇಸ್‌ಗಳನ್ನು ವಾಪಸ್ ಪಡೆಯಲು ಯಾರಾದರೂ ಮನವಿ ಮಾಡ್ತಾರೆ. ಆಗ ನಾವು ಅದರ ಪರಿಶೀಲನೆಗೆ ಸಂಪುಟ ಉಪಸಮಿತಿ ಮಾಡುತ್ತೇವೆ. ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೇಳುತ್ತೇವೆ. ನಂತರ ಸಂಪುಟ ಉಪಸಮಿತಿ ಅದರ ಬಗ್ಗೆ ತೀರ್ಮಾನ ಮಾಡುತ್ತದೆ. ವಾಪಸ್ ತಗೋಬೇಕಾ ಬೇಡವಾ ಎಂದು ಉಪಸಮಿತಿ ನಿರ್ಧರಿಸುತ್ತದೆ. ಹುಬ್ಬಳ್ಳಿ ಕೇಸ್‌ಗಳೂ ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಅಂತ ಸಂಪುಟ ಉಪಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ನಂತರ ಸಂಪುಟ ಸಭೆಯಲ್ಲಿ ಕೇಸ್‌ಗಳನ್ನು ವಾಪಸ್ ಪಡೆಯುವ ನಿರ್ಧಾರ ಆಗಿದೆ. ಇದನ್ನು ಕೋರ್ಟಿಗೆ ಕಳಿಸುತ್ತೇವೆ. ಕೋರ್ಟ್ ಒಪ್ಪಿಕೊಂಡರೆ ಆ ಕೇಸ್‌ಗಳು ವಾಪಸ್ ಆಗುತ್ತವೆ. ಇದನ್ನೆ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹಲವು ಕೇಸ್‌ಗಳನ್ನು ವಾಪಸ್ ಪಡೆಯಲಾಗಿತ್ತು,
ಯುಪಿಯಲ್ಲಿ ಅಲ್ಲಿನ ಸಿಎಂ ವಿರುದ್ಧವೇ ಹಲವು ಕೇಸ್‌ಗಳಿದ್ದವು. ಅದನ್ನೆಲ್ಲ ಅವರು ವಾಪಸ್ ಪಡೆದುಕೊಂಡಿದ್ದರು.

ಈಗ ಹುಬ್ಬಳ್ಳಿ ಕೇಸ್‌ಗಳನ್ನು ವಾಪಸ್ ಪಡೆಯಲು ಕೋರ್ಟ್ ಒಪ್ಪುತ್ತೋ ಇಲ್ವೋ ಗೊತ್ತಿಲ್ಲ,ನೋಡೋಣ ಎಂದು ಪರಮೇಶ್ವರ್ ಹೇಳಿದರು.