ಮಾದಕವಸ್ತುಗಳ ದಂಧೆ ನಿಗ್ರಹಿಸುವುದೇ ಸರ್ಕಾರದ ಗುರಿ:ಸಿದ್ದರಾಮಯ್ಯ

ಬೆಂಗಳೂರು: ಮಾದಕವಸ್ತುಗಳ ನಿಯಂತ್ರಣಕ್ಕೆ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲು ಯೋಚಿಸುತ್ತಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಯುವಜನತೆ ಬಲಿಯಾಗದಂತೆ, ಮಾದಕ ವಸ್ತುಗಳ ದಂಧೆಯನ್ನು ನಿಗ್ರಹಿಸುವುದೇ ಸರ್ಕಾರದ ಗುರಿ ಎಂದು ಕಡಕ್ಕಾಗಿ ಹೇಳಿದರು.

ಮಂಗಳವಾರ ರಾಜ್ಯ ಎನ್ಎಸ್ಎಸ್ ಕೋಶ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಬಾಗಿತ್ವದಲ್ಲಿ ವಿಧಾನಸೌಧ ದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ತಂಬಾಕು ಮುಕ್ತ ಯುವ ಅಭಿಯಾನ 2.0 ಬೃಹತ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆನೀಡಿ ನಂತರ ಸಿಎಂ ಮಾತನಾಡಿದರು

ಯುವಜನತೆಯಲ್ಲಿ ತಂಬಾಕು ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ತಂಬಾಕು ಮುಕ್ತ ಯುವ ಅಭಿಯಾನ 2.0 ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಬಳಕೆಯನ್ನು ಮಾಡುವುದಿಲ್ಲ, ಮಾಡಲೂ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಇಂದು ಪ್ರತಿಜ್ಞೆ ಕೈಗೊಂಡಿದ್ದಾರೆ. ಈ ಪ್ರತಿಜ್ಞೆಯನ್ನು ಅಕ್ಷರಶ: ಪಾಲಿಸುವ ಕರ್ತವ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ತಿಳಿಹೇಳಿದರು.

ತಂಬಾಕು ಸೇವಿಸುತ್ತಿರುವವರಲ್ಲಿ ಶೇ.50 ರಷ್ಟು ಜನ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿ ದ್ದಾರೆ. ಯುವಜನತೆ ತಂಬಾಕು ಸೇವನೆ ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬಾರದು ಎಂದು ಸಿದ್ದು ಕಳಕಳಿಯಿಂದ ತಿಳಿಸಿದರು.

ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ ಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿದ್ದು, ಇದನ್ನು ನಿಗ್ರಹಿಸಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ ಎಂದು ತಿಳಿಸಿದರು.

ಒಂದು ವೇಳೆ ಯಾವುದೇ ಯುವಕ ಯುವತಿಯರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಲ್ಲಿ, ಕೂಡಲೇ ನಿಲ್ಲಿಸಬೇಕು,
ರಾಜ್ಯದ ಎಲ್ಲ ಯುವಸಮುದಾಯಗಳು ದುಶ್ಚಟ ಗಳಿಂದ ದೂರವಾಗುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.