ಮೂಡ ಪ್ರಕರಣ:ಮರೀಗೌಡ ರಾಜೀನಾಮೆ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ಸಲ್ಲಿಸಿದ್ದಾರೆ.

ಮರೀಗೌಡ ಅವರು ಬುಧವಾರ ವಿಕಾಸಸೌಧ ದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪ ಚೋಳನ್‌ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ರಾಜೀನಾಮೆ ಕೊಡುವ ಬಗ್ಗೆ ಮುಖ್ಯ ಮಂತ್ರಿಗಳಿಗೆ ಮೊದಲು ಮಾಹಿತಿ ನೀಡಿದ್ದರು.

ರಾಜೀನಾಮೆ ಕೊಟ್ಟ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮರೀಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೇನೆ‌ ಎಂದು ಸ್ಪಷ್ಟಪಡಿಸಿದರು.

ಮುಖ್ಯ ಮಂತ್ರಿಗಳು ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ದರು,ಜತೆಗೆ ಇತ್ತೀಚೆಗೆ ನನ್ನ ಆರೋಗ್ಯವು ಸರಿಯಿಲ್ಲ ಆದ್ದರಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ಮೂಡ ಪ್ರಕರಣದ ತನಿಖೆ ನಡೆಯುತ್ತಿದೆ ನಡೆಯಲಿ, ಅಕ್ರಮ ಆಗಿದೆಯಾ ಇಲ್ಲವಾ ಎಂಬುದನ್ನು ನಾನು ಹೇಳುವುದಿಲ್ಲ. ಈಗ ತನಿಖೆ ನಡೆಯುತ್ತಿದೆ,ತನಿಖೆಯಿಂದ ಸತ್ಯ ಹೊರಬರುತ್ತದೆ ಎಂದು ಹೇಳಿದರು.

ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ, ಸೈಟ್ ವಿಚಾರವಾಗಿ ಸಿಎಂ ಅವರು ನನ್ನ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ಸಿದ್ದರಾಮಯ್ಯ ನಮ್ಮ ನಾಯಕರು. 40 ವರ್ಷಗಳಿಂದ ಅವರ ಜೊತೆಯಲ್ಲಿ ಇದ್ದೇನೆ. ತಾಲೂಕು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ನನ್ನನ್ನು ಮಾಡಿದ್ದರು. ಯಾವತ್ತು ಕೂಡಾ ಸಿದ್ದರಾಮಯ್ಯ ಅವರು ಅಕ್ರಮ ಮಾಡಿ ಅಂತಾ ಹೇಳಿಲ್ಲ. ಮುಡಾ ವಿಚಾರದಲ್ಲೂ ಸಿಎಂ ಒತ್ತಡ ಹಾಕಿಲ್ಲ ಎಂದು ಮರಿಗೌಡ ಸ್ಪಷ್ಟಪಡಿಸಿದರು.

ಎರಡು ಬಾರಿ ಸ್ಟ್ರೋಕ್ ಆಯ್ತು. ಆರೋಗ್ಯ ಸರಿಯಿಲ್ಲ. ಹೀಗಾಗಿ ಮುಡಾ ಅಧ್ಯಕ್ಷರಾಗಿ ಮುಂದುವರೆಯಲು ಸಾಧ್ಯವಿಲ್ಲ ಅಂತಾ ರಾಜೀನಾಮೆ ಕೊಟ್ಟಿದ್ದೇನೆ. ಇಲಾಖೆ ಸಚಿವರು ರಾಜೀನಾಮೆಗೆ ಒತ್ತಡ ಮಾಡಿದ್ದರು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಮರೀಗೌಡ ತಿಳಿಸಿದರು.