ಜಾಹೀರಾತಿನಿಂದ ಜಾಹೀರಾತುಗೊಸ್ಕರವೇ ನಡೆಯುತ್ತಿರುವ ಸರ್ಕಾರ‌:ಹೆಚ್ ಡಿ ಕೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾಹೀರಾತುಗಳಿಂದ ಜಾಹೀರಾತುಗೊಸ್ಕರವೇ ನಡೆಯುತ್ತಿರುವ ಸರ್ಕಾರ‌ ಎಂದು ಕೇಂದ್ರ‌ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಅಚ್ಚರಿ ಎಂದರೆ ಸರ್ಕಾರದ ವಾಲ್ಮೀಕಿ ಜಯಂತಿ ಜಾಹೀರಾತಿನಲ್ಲಿ ಸತ್ಯಮೇಯ ಜಯತೇ ವಾಕ್ಯವೇ ನಾಪತ್ತೆಯಾಗಿದೆ ಎಂದು  ವ್ಯಂಗ್ಯವಾಡಿದರು.

ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕೆ,ಈ ಸರ್ಕಾರ ಕೆಲಸದಲ್ಲಿ ಅಸಮರ್ಥ, ಪ್ರಚಾರದಲ್ಲಿ ಮಾತ್ರ ಶರವೇಗ ಎಂದು ಕುಟುಕಿದರು.

ರಾಜ್ಯದಲ್ಲಿ ಈಗಿನ ಸರ್ಕಾರದ ವೈಫಲ್ಯಗಳೇ ಎದ್ದು ಕಾಣುತ್ತಿವೆ‌. ಈ ರಾಜ್ಯದಲ್ಲಿ ನಿಜಕ್ಕೂ ಸರ್ಕಾರ ಇದೆಯಾ ಎಂಬ ಅನುಮಾನ ಕಾಡುತ್ತಿದೆ, ಬೆಂಗಳೂರನಲ್ಲಿ ಮಳೆಯ ಅನಾಹುತದಿಂದ ಜನರು ಕಂಗೆಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ‌. ಬೆಳೆಗಳು ನಷ್ಟವಾಗುತ್ತಿವೆ, ಆದರೆ, ಜನರ ನೆರವಿಗೆ ಸರಕಾರ ಧಾವಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನೀರು ತುಂಬಿದ್ದರೆ ಅರ್ಧ ಗಂಟೆಯಲ್ಲಿ ಖಾಲಿ ಮಾಡೋದು ನಮಗೆ ಗೊತ್ತಿದೆ ಅಂತ ಡಿಸಿಎಂ ಹೇಳುತ್ತಾರೆ. ಜನರಿಗೆ ಊಟ ಇಲ್ಲ, ಮಲಗಲು ಜಾಗ ಇಲ್ಲ, ಮನೆಗಳಲ್ಲಿ ನೀರು ತುಂಬಿದೆ. ಹೊಟೇಲ್‌ನಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಇದೆ‌‌. ಈ ಸಮಸ್ಯೆ ಹಲವಾರು ವರ್ಷಗಳಿಂದ ಇದೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದವರು ಬೆಂಗಳೂರು ನಗರವನ್ನು ಮಳೆಯಲ್ಲಿ ಮುಳುಗಿಸಿದ್ದಾರೆ ಎಂದು ಹೆಚ್ ಡಿ ಕೆ ಆಕ್ರೋಶ‌ ವ್ಯಕ್ತಪಡಿಸಿದರು.

110 ಹಳ್ಳಿಗೆ ನೀರು ನೀಡುತ್ತಿದ್ದೇವೆ ಅಂತ ಬಡಾಯಿ ಕೊಚ್ಚಿಕೊಂಡಿದ್ದಾರೆ‌. ಈ ಕುಮಾರಸ್ವಾಮಿಯೇ ಅಷ್ಟೂ ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತಂದಿದ್ದು, ಇವರು ದಿನಕ್ಕೊಂದು ಶಂಕುಸ್ಥಾಪನೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಕುಮಾರಸ್ವಾಮಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಅಂತ ಸಿಎಂ ಹೇಳಿದ್ದಾರೆ, ಕೇಂದ್ರ ಯೋಜನೆ‌ಯಾದ ಜೆ ಎನ್ ಆರ್ ಯು ಎಂ ಸ್ಕೀಮ್ ಮೂಲಕ ಬೆಂಗಳೂರಿನ ಹೊರ ಹೊಲಯದ ಹಳ್ಳಿಗಳನ್ನು ನಗರಕ್ಕೆ ಸೇರಿಸುವ ಕೆಲಸ ಮಾಡಿದ್ದೇ ನಾನು. 7 ನಗರ ಸಭೆಗಳನ್ನು ಬಿಬಿಎಂಪಿಗೆ ಸೇರಿಸಿದ್ದು ನಾನು. 2007ರಲ್ಲಿಯೇ 9,000 ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಡಿಸಿಎಂ ಹೊಸದಾಗಿ ಟೌನ್ ಶಿಫ್ ಮಾಡಲು ಹೊರಟಿದ್ದಾರೆ.ಯಾರಿಗಾಗಿ ಈ ಟೌನ್ ಶಿಪ್ ತನಗೆ ಬೇಕಾದ ರಿಯಲ್ ಎಸ್ಟೇಟ್ ಕುಳಗಳನ್ನು ಉದ್ಧಾರ ಮಾಡುವುದಕ್ಕೆ ಈ ಟೌನ್ ಶಿಪ್ ಮಾಡಲಾಗುತ್ತಿದೆಯಾ ಎಂದು ಕಿಡಿಕಾರಿದರು.

ಡಿಸಿಎಂ ನೈಸ್ ರಸ್ತೆ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರು ಅಡ್ಡಿ ಮಾಡಿದ್ದರಿಂದ ರಸ್ತೆ ಅಗಲಿಲ್ಲವಂತೆ. ಯಾರು ಮಾಡಬೇಡಿ ಅಂತ ಹೇಳಿದರು ಇವರಿಗೆ? ಇಷ್ಟು ದಿನ ಯಾಕೆ ಸುಮ್ಮನೆ ಇದ್ದರು? ನೈಸ್ ಗೆ ವಶಪಡಿಸಿಕೊಂಡಿದ್ದ ರೈತರ ಭೂಮಿಯನ್ನು ಕಬಳಿಕೆ ಮಾಡಿ ಡೈನೋಟಿಫೈ ಮಾಡಿಕೊಂಡವರು ಯಾರು? ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ನೈಸ್ ರಸ್ತೆ ಬಗ್ಗೆ ಸದನ ಟಿ.ಬಿ.ಜಯಚಂದ್ರ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಏನು ಮಾಡಿದಿರಿ? ಇಡೀ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆ ಸಮಿತಿ ಶಿಫಾರಸು ಮಾಡಿತ್ತು? ಹೊಸಕೆರೆಹಳ್ಳಿ ಬಳಿ ಶೋಭಾ ಡೌಲಪರ್ಸ್ ಬಿಲ್ಡಿಂಗ್ ಕಾಮಗಾರಿ ನಡೆಯುತ್ತಿದೆ. ಅದರ ಪಾಲುದಾರರು ಯಾರಪ್ಪ? ನೈಸ್ ಹೆಸರಿನಲ್ಲಿ ರೈತರ ಜೀವನ ಹಾಳು ಮಾಡಿದವರು ನೀವು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜೆಡಿಎಸ್ ಸಂಸದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ,ರಾಜ್ಯದ ಎಲ್ಲಾ ಸಂಸದರಿಗೂ ಹೊಸ ಕಾರು ಕೊಡಲಾಗಿದೆ. ಆದರೆ, ನನಗೆ ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಅವರಿಗೆ ಮಾತ್ರ ಹೊಸ ಕಾರು ಭಾಗ್ಯ ಇಲ್ಲ. ಈ ರೀತಿ ರಾಜಕೀಯ ನಾನು ಮಾಡಿಲ್ಲ ಎಂದು ಇದೇ‌ ವೇಳೆ ಹೆಚ್ ಡಿ ಕೆ‌ ಆರೋಪಿಸಿದರು.