ಮುಡಾ ಹಗರಣ:ಸಿದ್ದು ರಾಜೀನಾಮೆಗೆ ಯದುವೀರ್ ಆಗ್ರಹ

ಮೈಸೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಲೋಕಸಭಾ ಸದಸ್ಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯದುವೀರ್, ಮುಡಾ ಪ್ರಕರಣವನ್ನು ಸಿಬಿಐ ನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ  ನಡೆಸಬೇಕು ಎಂದು ಆಗ್ರಹಿಸಿದರು.

ಮೂಡಾ ಹಗರಣದ ಬಗ್ಗೆ ಮಾಹಿತಿ ನೀಡುವಂತೆ ಇಡಿ ಮುಡಾ ಅಧಿಕಾರಿಗಳಿಗೆ 3 ಬಾರಿ ನೋಟಿಸ್ ನೀಡಿದ್ದರೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ದಾಳಿ ಹಿಂದೆ ಯಾವುದೇ ರಾಜಕೀಯ ದ್ವೇಷ ಇಲ್ಲ ಎಂದು ಹೇಳಿದರು.

ಮುಡಾದಲ್ಲಿ ನಡೆದಿದೆ ಎನ್ನಲಾದ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿಯವರಿಗೆ ನೀಡಲಾಗಿರುವ 14 ಸೈಟ್ ಗಳ ಕುರಿತು  ಮಾತ್ರ ಅಲ್ಲ ಮುಡಾದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆಯೂ ಸಿಬಿಐ ತನಿಖೆ ನಡೆಯಬೇಕು ಎಂದು ಯದುವೀರ್ ಒತ್ತಾಯಿಸಿದರು.

ಮೈಸೂರು ಏರ್ಪೋರ್ಟ್ ನಲ್ಲಿ ರನ್ ವೇ ಕಾರ್ಯ ನಡೆಯುತ್ತಿರುವುದರಿಂದ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳು ಆಗಮಿಸುತ್ತಿಲ್ಲ ಎಂದು ಸಂಸದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಶ್ರೀವತ್ಸ, ಮಾಜಿ ಶಾಸಕ ನಾಗೇಂದ್ರ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.