ಮೈಸೂರು: ರಾಯಚೂರು ಕಾಂಗ್ರೆಸ್ ಸಂಸದ ಜಿ.ಕುಮಾರನಾಯ್ಕ್ ಲೋಕಾಯುಕ್ತ ಕಚೇರಿಗೆ ಆಗಮಿಸಿ ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂದ ಮಾಹಿತಿ ನೀಡಿದರು.
ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದ ಪರಿಣಾಮ ಇದೀಗ ಕೋರ್ಟ್ ಆದೇಶದಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ.
ಮುಡಾ ನಿವೇಶನ ಹಂಚಿಕೆಯಾದ ವೇಳೆ ಜಿ.ಕುಮಾರನಾಯ್ಕ್ ಮೈಸೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಅವರಿಂದ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಮಾಹಿತಿ ಹಾಗೂ ಹೇಳಿಕೆ ಪಡೆದರು.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಜಿ. ಕುಮಾರನಾಯ್ಕ್ ಅವರು ಮುಡಾ ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಚಾರಣೆ ನಡೆಯುತ್ತಿದೆ. ಘಟನೆ ನಡೆದ ವೇಳೆ ನಾನು ಮೈಸೂರು ಜಿಲ್ಲಾಧಿಕಾರಿಯಾಗಿದ್ದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ನೋಟಿಸ್ ನೀಡಿ ವಿಚಾರಣೆಗೆ ಆಗಮಿಸುವಂತೆ ತಿಳಿಸಿದ್ದರು.ಲೋಕಾಯುಕ್ತ ಕಚೇರಿಗೆ ಬಂದು ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಎಂದು ತಿಳಿಸಿದರು.
ಈ ಘಟನೆ ನಡೆದು ಇಪ್ಪತ್ತು ವರ್ಷಗಳು ಕಳೆದಿದೆ, ಭೂಸ್ವಾಧೀನದ ಪ್ರಕ್ರಿಯೆಯ ಬಗ್ಗೆ ಲೋಕಾಯುಕ್ತರು ಕೇಳಿದ ಮಾಹಿತಿಗಳನ್ನು ಒದಗಿಸಿರುವೆ. ಸುಮಾರು ಎರಡು ತಾಸುಗಳವರೆಗೆ ಪ್ರಶ್ನಾವಳಿ ನಡೆದವು ಎಂದು ಕುಮಾರನಾಯ್ಕ್ ತಿಳಿಸಿದರು.