ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಸ್ಪರ್ಧೆ-ಸಿ.ಪಿ.ಯೋಗೇಶ್ವರ್

ಬೆಂಗಳೂರು: ಜೆಡಿಎಸ್‌ನಿಂದ ನಿಂತರೇ ಕಷ್ಟ ಆಗಲಿದೆ ಬಿಜೆಪಿಯಿಂದಲೇ ನಿಲ್ಲಬೇಕೆಂಬ ಆಸೆ ಇದೆ, ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಯೋಚನೆಯಿದೆ ಎಂದು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ವಿಚಾರವಾಗಿ ನಾನು ಅವಕಾಶ ಕೊಟ್ಟರೆ ಎನ್‌ಡಿಎ ಅಭ್ಯರ್ಥಿ ಆಗುತ್ತೇನೆ ಆದರೆ ಅವಕಾಶ ಸಿಗಬೇಕಿದೆ ಎಂದು ತಿಳಿಸಿದರು.

ನಾನು ಕುಮಾರಸ್ವಾಮಿ ಅವರೊಂದಿಗೆ ಮೂರು ದಿನಗಳಿಂದ ಚರ್ಚೆ ಮಾಡಿದ್ದೇನೆ ಬಿಜೆಪಿಯಿಂದಲೇ ನಿಲ್ಲಬೇಕೆಂಬ ಆಸೆ ಇದೆ. ಆದರೆ ಅವರು ಆಗಲ್ಲ ಅಂತಿದ್ದಾರೆ ನೋಡೋಣ ಎಂದರು.

ಕುಮಾರಸ್ವಾಮಿಯವರ ಮನಸ್ಸಿನಲ್ಲಿ ಅವರ ಮಗನಿಗೆ ಅಥವಾ ತಮ್ಮ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎಂಬ ಆಸೆ ಇದೆ. ಅವರ ಮನಸಲ್ಲೇ ಆ ತರಹ ಇದ್ದರೆ ಏನು ಮಾಡೋಕ್ಕಾಗುತ್ತೆ ಎಂದು ಪ್ರಶ್ನಿಸಿದರು ಸಿಪಿವೈ.

ಜೆಡಿಎಸ್ ಚಿನ್ಹೆಯಲ್ಲಿ ನಿಲ್ಲಿ ಎಂದು ಅವರು ಮುಕ್ತವಾಗೇನೂ ಹೇಳಿಲ್ಲ, ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ದರು ಅಷ್ಟೇ. ನಾನು ನನ್ನ ತಾಲೂಕಿನ ಜನರ ಜೊತೆಗೂ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ,ಬಹಳ ಭಿನ್ನಾಭಿಪ್ರಾಯ ಬಂದಿದೆ ಎಂದು ತಿಳಿಸಿದರು.

ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ. ಈಗ ಅನಾವಶ್ಯಕವಾಗಿ ಜೆಡಿಎಸ್‌ಗೆ ಹೋಗುವುದು ಬೇಡ ಅಂತ ತಾಲೂಕಿನಲ್ಲಿ ಅಭಿಪ್ರಾಯ ಬಂದಿದೆ. ಮೊದಲೇ ನನಗೆ ಪಕ್ಷಾಂತರಿ ಎಂದು ಕರೆಯುತ್ತಾರೆ. ಹಾಗಾಗಿ ಬಿಜೆಪಿಯಿಂದಲೇ ನಿಲ್ಲಿ ಎಂದು ಹೇಳುತ್ತಿದ್ದಾರೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ಕೊಡುತ್ತಿಲ್ಲ ಎಂದು ಯೋಗೇಶ್ವರ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದಾರೆಂಬ ಹೆಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯುಸಿ, ನನ್ನ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುವ ಅಗತ್ಯ ಇಲ್ಲ. ಟಿಕೆಟ್ ಕೊಡದಿದ್ದರೆ ನಿಮ್ಮ ಮಗನಿಗೇ ಕೊಡಿ. ಆದರೆ ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದೆ ಎಂದು ಹೇಳಬೇಡಿ, ನಾನು ಇಲ್ಲಿಯವರೆಗೆ ಕಾಂಗ್ರೆಸ್‌ನ ಯಾವ ನಾಯಕರನ್ನೂ ಭೇಟಿ ಮಾಡಿಲ್ಲ.ಆದರೆ ಭೇಟಿ ಮಾಡಿದರೆ ತಪ್ಪೇನಿಲ್ಲ ಭೇಟಿ ಮಾಡಬೇಕೆನಿಸಿದರೆ ಭೇಟಿ ಆಗುತ್ತೇನೆ. ಮುಚ್ಚುಮರೆ ಮಾಡಲ್ಲ. ಆದರೆ ಈವರೆಗೆ ಯಾರನ್ನೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಎಂದು ಯಡಿಯೂರಪ್ಪ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಈ ಸಂದರ್ಭದಲ್ಲಿ ಯಡಿಯೂರಪ್ಪನವರು ಅಂತಹ ಹೇಳಿಕೆ ಕೊಡುವ ಅಗತ್ಯವಿರಲಿಲ್ಲ, ಆದರೆ ಕುಮಾರಸ್ವಾಮಿ ಅವರಿಗೆ ದೊಡ್ಡ ಮನಸು ಇದ್ದಿದ್ದರೆ ಅನುಕೂಲ ಆಗುತ್ತಿತ್ತು. ಅವರು ಉದ್ದೇಶಪೂರ್ವಕ ಈ ಹೇಳಿಕೆ ಕೊಟ್ಟಿದ್ದಾರೆ. ಇದರ ಹಿಂದೆ ದುರುದ್ದೇಶ ಇದೆ ಎಂದು ಬೇಸರಪಟ್ಟರು ಸಿಪಿವೈ.

ಇನ್ನೂ ಎರಡು ದಿನ ಕಾದು ನೋಡುವ ತಂತ್ರವನ್ನು ಉಪಯೋಗಿಸುತ್ತೇನೆ. ನಾನು ಈ ಕ್ಷಣಕ್ಕೂ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡು ಇದ್ದೇನೆ,ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ನಮ್ಮ ಜಿಲ್ಲಾಧ್ಯಕ್ಷರು ಎಂದು ಹೇಳಿದ್ದಾರೆ, ಒಳ್ಳೇದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಯೋಗೇಶ್ವರ್ ತಿಳಿಸಿದರು.