ಚನ್ನಪಟ್ಟಣ: ವಕ್ಫ್ ಕಬಂಧ ಬಾಹುಗಳು ಚನ್ನಪಟ್ಟಣಕ್ಕೂ ಚಾಚಿಕೊಳ್ಳುತ್ತಿದೆ ಎಂದು
ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅಶೋಕ್,ರೈತರು ಕೂಡಲೇ ತಾಲ್ಲೂಕು ಕಚೇರಿಗೆ ಹೋಗಿ ತಮ್ಮ ಭೂ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನೂರಾರು ವರ್ಷಗಳಿಂದ ರೈತರು ಭೂಮಿಯಲ್ಲಿ ಬಾಳಿ ಬದುಕುತ್ತಿದ್ದಾರೆ. ಆದರೆ, ಇವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅದಕ್ಕೂ ಹಿಂದಿನಿಂದಲೂ ಈ ಭೂಮಿ ನಮ್ಮ ವಶದಲ್ಲಿ ಇತ್ತು ಎಂದು ತಗಾದೆ ತೆಗೆಯುತ್ತಿದ್ದಾರೆ. ವಕ್ಫ್ ಎಷ್ಟರ ಮಟ್ಟಿಗೆ ಭೂಮಿಯನ್ನು ಹೊಂದಿದೆ ಎಂದರೆ ಭಾರತೀಯ ಸೇನೆಗಿಂತ ಜಾಸ್ತಿ ಭೂಮಿ ವಕ್ಫ್ ಮಂಡಳಿ ವಶದಲ್ಲಿದೆ ಎಂದು ದೂರಿದರು.
17 ಕೆರೆ ತುಂಬಿಸಲು ಹಣ ನೀಡಿದ್ದು ಅಂದಿನ ಸಿಎಂ ಡಿ.ವಿ.ಸದಾನಂದ ಗೌಡರು. ಹಣ ಬಿಡುಗಡೆಗೆ ಆದೇಶ ಮಾಡಿದ್ದು ಬಸವರಾಜ್ ಬೊಮ್ಮಾಯಿ ಹಾಗೂ ಯೋಜನೆಗೆ ಚಾಲನೆ ನೀಡಿದ್ದು ನೀರಾವರಿ ಎಂಜಿನಿಯರ್ ವೆಂಕಟೇ ಗೌಡ. ಈ ವೆಂಕಟೇ ಗೌಡ ಹಲವು ಸಲ ನಮ್ಮ ಮೇಲೆ ಒತ್ತಡ ಹಾಕಿ ಈ ಯೋಜನೆ ಜಾರಿಗೆ ಬರುವಂತೆ ನೋಡಿಕೊಂಡು, ಅದನ್ನು ಅನುಷ್ಠಾನ ಮಾಡಿದರು. ಇದಕ್ಕೂ ಯೋಗೇಶ್ವರ್ ಅವರಿಗೂ ಸಂಬಂಧವೇ ಇಲ್ಲ ಎಂದು ಅಶೋಕ್ ಹೇಳಿದರು.
ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಚನ್ನಪಟ್ಟಣಕ್ಕೆ ಹದಿನೆಂಟು ಸಲ ಸುತ್ತು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗದೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದು ಯಾಕೆ? ಎಂದು ಪ್ರಶ್ನಿಸಿದರು.