ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು ಈಗ ಉಲ್ಟಾ ಹೊಡೆದದ್ದು ಏಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಸವರಾಜ ಬೊಮ್ಮಾಯಿಯವರು ರಾಜಕೀಯ ಕಾರಣಕ್ಕಾಗಿ ಈಗ ವಿರುದ್ಧವಾಗಿ ಮಾತನಾಡುತ್ತಾರೆ, ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ ಎಂದು ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿಯವರು ರಾಜಕಾರಣಕ್ಕಾಗಿ ಈ ವಿಚಾರವನ್ನು ಇಟ್ಟುಕೊಂಡು ಹೋರಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ ನೋಟೀಸು ಕೊಟ್ಟಿದ್ದಾರೆ, ಎಲ್ಲಾ ಕಾಲದಲ್ಲಿಯೂ ನೋಟೀಸು ನೀಡಲಾಗಿದೆ ಎಂಬುದು ಜನರಿಗೆ ಅರ್ಥವಾಗಿದೆ ಎಂದು ಹೇಳಿದರು.
ವಕ್ಫ್ ಆಸ್ತಿ ವಿಚಾರ ನಮಗೆ ಗೊತ್ತಾದ ತಕ್ಷಣವೇ ನೋಟೀಸು ಹಿಂಪಡೆಯಲಾಗಿದೆ . ಬಿಜೆಪಿ ಅವಧಿಯಲ್ಲಿ 216 ಪ್ರಕರಣಗಳಲ್ಲಿ ನೋಟೀಸು ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಹೆಚ್.ಡಿ ಕುಮಾಸ್ವಾಮಿ ಇದ್ದಾಗ ಏಕೆ ನೋಟೀಸು ಕೊಟ್ಟಿದ್ದಾರೆ ಎಂದು ಸಿದ್ದು ಕಾರವಾಗಿ ಪ್ರಶ್ನಿಸಿದರು.
ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರಿಗೆ ನಾವು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.
ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ 16 ನೇ ಹಣಕಾಸು ಆಯೋಗದವರು ಬೆಂಗಳೂರಿಗೆ ಭೇಟಿ ನೀಡಿದಾಗ 15 ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದೇವೆ. ಸುಮಾರು 4.50 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ವರ್ಷಕ್ಕೆ ತೆರಿಗೆ ನೀಡುತ್ತಿದ್ದೇವೆ. ಅದರಲ್ಲಿ ನಮಗೆ ವಾಪಸ್ಸು ಬರುವುದು 55 ರಿಂದ 60 ಸಾವಿರ ಕೋಟಿ ರೂಪಯಿಗಳಷ್ಟು ಮಾತ್ರ. ಇದು ನ್ಯಾಯವೇ ಎಂದು ಸಿಎಂ ಪ್ರಶ್ನಿಸಿದರು.
11495 ಕೋಟಿ ರೂಪಾಯಿಗಳನ್ನ ಕೊಟ್ಟಿದ್ದಾರೆಯೇ, ಕೊಟ್ಟಿದ್ದರೆ ನಾನು ರಾಜಕೀಯವನ್ನೇ ಬಿಟ್ಟುಬಿಡುವೆ ಎಂದ ಸಿದ್ದರಾಮಯ್ಯ ಪ್ರಹ್ಲಾದ ಜೋಶಿ ಬಿಡುತ್ತಾರೆಯೇ ಕೇಳಿ ಎಂದು ಪ್ರಶ್ನಿಸಿದರು.
ಆರ್ಥಿಕ, ಸಾಮಾಜಿಕ ಶಕ್ತಿ ಬಡವರಿಗೆ ಬರಬಾರದೆಂಬ ತತ್ವದಲ್ಲಿ ಬಿಜೆಪಿಗೆ ನಂಬಿಕೆ ಇದೆ. ಬಿಜೆಪಿ 600 ಭರವಸೆ ಗಳನ್ನು 2018 ರಲ್ಲಿ ನೀಡಿತ್ತು. ಅವುಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ. ನಾವು 165 ಭರವಸೆ ಕೊಟ್ಟು 158 ಈಡೇರಿಸಿದ್ದಾಗಿ ಲೆಕ್ಕ ಕೊಡುತ್ತಿದ್ದೇವೆ. ಅವರು ಎಷ್ಟು ಭರವಸೆ ನೀಡಿ ಎಷ್ಟನ್ನು ಈಡೇರಿಸಿದ್ದಾರೆ ಎನ್ನುವ ಲೆಕ್ಕ ಕೊಡುತ್ತಾರೆಯೇ ಎಂದು ಸಿಎಂ ಸವಾಲು ಹಾಕಿದರು.
ವಕ್ಫ್ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ ಮೇಲೂ ಬಿಜೆಪಿ ಹೋರಾಟ ಮಾಡುತ್ತಿದೆ ಎಂದರೆ ರಾಜಕೀಯ ಅಲ್ಲದೆ ಇನ್ನೇನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳು ಸಂಪೂರ್ಣ ಮುಸ್ಲಿಂ ಆಗಿದ್ದಾರೆ ಎಂಬ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಅವರೊಬ್ಬ ಮಹಾನ್ ಕೋಮುವಾದಿ. ಕೋಮುವಾದಿಗಳಿಂದ ಇನ್ನೇನು ನಿರೀಕ್ಷೆ ಮಾಡಲಾಗುತ್ತದೆ ಎಂದರು.
ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ ಕೋಮುವಾದ ಮಾಡುವುದೇ ಅವರ ಕಸುಬು. ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವುದೇ ಅವರ ರಾಜಕಾರಣ ಎಂದು ಸಿದ್ದರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದರು.