ಎಚ್.ಡಿ. ಕೋಟೆಯಲ್ಲಿ ಹುಲಿ ಪ್ರತ್ಯಕ್ಷ; ಕಾರ್ಯಚರಣೆ ಸ್ಟಾರ್ಟ್

ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ಪಟ್ಟಣದ ಹೆಬ್ಬಳ್ಳ, ಸ್ಟೇಡಿಯಂ ಬಡಾವಣೆಯ ಹಿಂಭಾಗ ಹುಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

ನಾಗಮ್ಮ ಬಸವರಾಜು ಅವರ ಜಮೀನಿನಲ್ಲಿ ಜಮೀನು ನೋಡಿಕೊಳ್ಳುವ ಚಂದ್ರು ಅವರ ಮೇಲೆ ಹುಲಿ ದಾಳಿ ಮಾಡಲು ಮುಂದಾಗಿದೆ‌.

ತಂತಿಭೇಲಿ ಇದ್ದುದರಿಂದ ಅವರು ಹುಲಿ ದಾಳಿಯಿಂದ ಬಾಚಾವಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಎರಡು ಆನೆಗಳ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿದೆ. ದಸರಾ ಆನೆಗಳಾದ ಬಳ್ಳೆ ಆನೆ ಶಿಬಿರಕ್ಕೆ ನೂತನವಾಗಿ ಬಂದಿರುವ ಮಹೇಂದ್ರ ಮತ್ತು ಭೀಮ ಆನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.50 ಕ್ಕೂ ಹೆಚ್ಚಿನ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಪಟ್ಟಣದ ಹೆಬ್ಬಳ್ಳ ಗ್ರಾಮದ ಬಳಿ ಮತ್ತು ಟೈಗರ್ ಬ್ಲಾಕ್ ಬಳಿ ಹುಲಿ ಇರುವ ಬಗ್ಗೆ ಮಾಹಿತಿ ದೊರೆತ ಹಿನ್ನಲೆ ಎರಡೂ ಕಡೆ ಒಂದೊಂದು ದಸರಾ ಆನೆಗಳ ಸಹಾಯದಿಂದ ಕಾರ್ಯಾಚಣೆ ಆರಂಭಿಸಲಾಗಿದೆ.

ಹೆಬ್ಬಳ್ಳ ಸಮೀಪದ ದಯಾನಂದ ಅವರ ಜಮೀನಿನ ಸಮೀಪ ಹುಲಿ ಕಂಡು ತಕ್ಷಣ ವಿಡಿಯೋವನ್ನು ಮಾಡಿ ಅರಣ್ಯ ಇಲಾಖೆಗೆ ಕಳುಹಿಸಿದ್ದಾರೆ.

ನಂತರ ಟೈಗರ್ ಬ್ಲಾಕ್ ನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಆನೆಯನ್ನು ಹೆಬ್ಬಳ್ಳಕ್ಕೆ ಕರೆಸಿಕೊಂಡು ಎರಡು ಆನೆಗಳು, ನುರಿತ ವೈದ್ಯರು ಹಾಗೂ ನುರಿತ ಅರವಳಿಕೆ ತಜ್ಞರ ಮೂಲಕ ಕಾರ್ಯಾಚರಣೆ ಆರಂಭಿಸಿದ್ದಾರೆ.

ಆನೆಗಳ ಮೂಲಕ ಕಾರ್ಯಾಚರಣೆ ಆರಂಭವಾದ ಒಂದು ಗಂಟೆಯ ಬಳಿಕ ಹುಲಿ ಕಾಣಿಸಿಕೊಂಡಿದೆ.ಆದರೆ ಹುಲಿ ದೂರವಿದ್ದ ಕಾರಣ ಅರವಳಿಕೆ ನೀಡಲು ಸಾಧ್ಯವಾಗಿಲಿಲ್ಲ.

ಹುಲಿಯ ಹೆಜ್ಜೆಯ ಜಾಡನ್ನಿಡಿದು ಕಾರ್ಯಾಚರಣೆ ಮುಂದುವರಿದಿದೆ.

ಸುದ್ದಿ ಹರಡುತ್ತಿದ್ದಂತೆ, ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿದ್ದರು. ಇದರಿಂದ ಜಮೀನುಗಳಲ್ಲಿ ಹಿಂಗಾರು ಬೆಳೆಗೆ ಬಿತ್ತನೆ ಮಾಡಿದ್ದ ರಾಗಿ, ಜೋಳ ಮತ್ತು ಭತ್ತದ ಫಸಲು ಹಾನಿಯಾಗಿದೆ.

ಹುಲಿಯು ಎರಡು ಮರಿಗಳೊಂದಿಗೆ ಸಂಚರಿಸುವುದನ್ನು ಹೆಬ್ಬಳ್ಳ, ಶಾಂತಿಪುರ, ಎಚ್.ಡಿ. ಕೋಟೆ ಪಟ್ಟಣ ಸೇರಿದಂತೆ ಹಲವು ಮಂದಿ ನೋಡಿದ್ದು, ಕಾರ್ಯಾಚರಣೆ ವೇಳೆ ಕೂಡಾ ಮರಿಗಳು ಮತ್ತು ಹುಲಿ ಚೆಲ್ಲಾಪಿಲ್ಲಿಯಾಗಿ ಚಲಿಸುವುದನ್ನು ಅರಣ್ಯ ಸಿಬ್ಬಂದಿ ಮತ್ತು ಸಾರ್ವಜನಿಕರು ಕಂಡಿದ್ದು, ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ.