ಬೆಂಗಳೂರು: ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ಮಂಥ್ಲಿ ಮನಿ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು,ಕೂಡಲೆ ಇಲಾಖೆಯ ಸಚಿವರು ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್,ಕಾಂಗ್ರೆಸ್ ಸರ್ಕಾರದ ಲಂಚಾವತಾರದ ಮತ್ತೂಂದು ಕರಾಳ ಅಧ್ಯಾಯ ಬಹಿರಂಗಗೊಂಡಿದ್ದು, ರಾಜ್ಯ ಮದ್ಯ ಮಾರಾಟಗಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಸಚಿವರು ಮಂಥ್ಲಿ ಮನಿ ಹೆಸರಿನಲ್ಲಿ ಮದ್ಯದ ಅಂಗಡಿಗಳಿಂದ ಪ್ರತಿ ತಿಂಗಳಿಗೆ 15 ಕೋಟಿ ರೂಪಾಯಿಯಂತೆ ವರ್ಷಕ್ಕೆ 180 ಕೋಟಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಅಬಕಾರಿ ಸಚಿವರನ್ನು ಬದಲಾಯಿಸಲು ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ವರ್ಗಾವಣೆ ದಂಧೆ, ಲೈಸೆನ್ಸ್ ಮಂಜೂರಾತಿ, ಮದ್ಯದ ಅಂಗಡಿಗಳಿಂದ ಮಂಥ್ಲಿ ಮನಿ ಸೇರಿದಂತೆ ಅಬಕಾರಿ ಸಚಿವರು ವರ್ಷಕ್ಕೆ ಸುಮಾರು 500 ಕೋಟಿ ರೂಪಾಯಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆರ್.ಅಶೋಕ್ ಒತ್ತಾಯಿಸಿದ್ದಾರೆ.