ಬುಲ್ಡೋಜರ್ ನ್ಯಾಯ ಕಾನೂನುಬಾಹಿರ; ಸುಪ್ರೀಂ ತೀರ್ಪು

ನವದೆಹಲಿ: ಬುಲ್ಡೋಜರ್ ನ್ಯಾಯ ಕಾನೂನುಬಾಹಿರ. ಕ್ರಿಮಿನಲ್ ಕೃತ್ಯಗಳು, ಆರೋಪಗಳು ಅಥವಾ ಅಪರಾಧಗಳ ಕಾರಣಕ್ಕೆ ಆಸ್ತಿಗಳನ್ನು ಕೆಡವಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಉತ್ತರ ಪ್ರದೇಶದ ಬುಲ್ಡೋಜರ್ ನ್ಯಾಯದ ಸಾಂವಿಧಾನಿಕ ಸಿಂಧುತ್ವದ ಕುರಿತು ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಬುಲ್ಡೋಝರ್ ನ್ಯಾಯ ಅಸಂವಿಧಾನಿಕ ಎಂದು ಹೇಳಿದೆ.

ಕಾರ್ಯಾಂಗ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ನ್ಯಾಯದ ಹೆಸರಿನಲ್ಲಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸಲು ಮತ್ತು ಅವರ ಮನೆಯನ್ನು ಕೆಡುವುದು ಅಸಂವಿಧಾನಿಕ ಎಂದು ತಿಳಿಸಿದೆ.

ಬುಲ್ಡೋಝರ್ ಕ್ರಮಕ್ಕೆ ಬ್ರೇಕ್ ಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ, ಕಾರ್ಯಾಂಗದ ಪ್ರತಿನಿಧಿಗಳು ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ರಾಜ್ಯ ಮತ್ತು ಅಧಿಕಾರಿಗಳು ನಿರಂಕುಶ ಮತ್ತು ಅತಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ. ಪೂರ್ವಭಾವಿ ಶೋಕಾಸ್ ನೋಟಿಸ್ ನೀಡದೆ ಮತ್ತು ನೋಟಿಸ್ ಜಾರಿ ಮಾಡಿದ 15 ದಿನಗಳ ಒಳಗಾಗಿ ಯಾವುದೇ ಕಟ್ಟಡವನ್ನು ಕೆಡವಬಾರದು ಎಂದು ಸೂಚಿಸಿದೆ.

ಮನೆಗಳನ್ನು ನೆಲಸಮ ಮಾಡಿರುವುದರ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಕೋರ್ಟ್‌, ರಾತ್ರೋರಾತ್ರಿ ಮಹಿಳೆಯರು, ಮಕ್ಕಳು ಬೀದಿಯಲ್ಲಿ ನಿಲ್ಲುವುದು ಒಳ್ಳೆಯ ವಿಚಾರವಲ್ಲ ಎಂದು‌ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಕೆ.ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಕೇವಲ ಆರೋಪವನ್ನು ಆಧರಿಸಿ, ಅವನ ಮನೆಯನ್ನು ಕೆಡವಿದರೆ, ಅದು ಕಾನೂನಿನ ಮೂಲ ತತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಕಾರ್ಯಾಂಗದ ಪ್ರತಿನಿಧಿಗಳು ನ್ಯಾಯಾಧೀಶರಾಗಲು ಮತ್ತು ಆರೋಪಿಯ ಆಸ್ತಿಯನ್ನು ಕೆಡವುವ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.