ಮೈಸೂರು: ಮುಡಾ ಹಗರಣದಲ್ಲಿ ಮಾಜಿ ಆಯುಕ್ತರಿಗೂ ಸಂಕಷ್ಟ ಶುರುವಾಗಿದೆ, ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳ ವಿಚಾರಣೆಗೆ ಲೋಕಾಯುಕ್ತ ಎಸ್ಪಿ ಉದೇಶ್ ಮುಂದಾಗಿರುವುದೆ ಇದಕ್ಕೆ ಕಾರಣ.
ಕೆಲ ದಿನಗಳ ಹಿಂದೆ ಮುಡಾ ಆಯುಕ್ತರಾಗಿ ನಿವೃತ್ತ ರಾಗಿದ್ದ ಸಧ್ಯ ಜೆಎಸ್ಎಸ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಸಿ.ಜಿ.ಬೆಟ್ಸೂರ್ ಮಠ್ ಅವರನ್ನು ಲೋಕಾಯುಕ್ತ ಎಸ್ಪಿ ಉದೇಶ್ ಅವರು ವಿಚಾರಣೆಗೊಳಪಡಿಸಿದ್ದರು.
ಈ ಹಿಂದೆ ಮುಡಾ ಆಯುಕ್ತರಾಗಿ ಹೆಚ್ಚುವರಿ ಪ್ರಭಾರ ವಹಿಸಿದ್ದರಿಂದ ಹೇಳಿಕೆ ನೀಡಲು ಅವರನ್ನು ಕರೆಸಿ, ಅರ್ಧ ಗಂಟೆಗಳ ಕಾಲ ವಿಚಾರಣೆಗೊಳಪಡಿಸ ಲಾಗಿತ್ತು.
ಮುಡಾ ಮಾಜಿ ಆಯುಕ್ತ ನಟೇಶ್ ಅವರಿಗೆ ನೋಟಿಸ್ ನೀಡಿದ ಬೆನ್ನಲ್ಲೆ ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿಂದಿನ ಆಯುಕ್ತರು ಹಾಗೂ ಅಧಿಕಾರಿಗಳಿಗೆ ನೋಟಿಸ್ ನೀಡಲು ಲೋಕಾಯುಕ್ತ ಎಸ್ಪಿ ಉದೇಶ್ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ಆಯುಕ್ತರಾಗಿದ್ದ ಡಾ.ಮಹೇಶ್, ಪಿ.ಎಸ್.ಕಾಂತರಾಜ್, ದಿನೇಶ್ ಸೇರಿದಂತೆ ಒಟ್ಟಾರೆ 2010 ರಿಂದ ಈವರೆಗೆ ಮುಡಾದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಎಲ್ಲಾ ಅಧಿಕಾರಿಗಳಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.