ರಾಮನಗರ: ಗೆಲುವಿನ ಕ್ರೆಡಿಟ್ ಅನ್ನು ಕಾಂಗ್ರೆಸ್ ಪಕ್ಷಕ್ಕೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ನನ್ನ ಆಪ್ತ ಸುರೇಶ್ಗೆ ಅರ್ಪಿಸುತ್ತೇನೆ ಎಂದು ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿ.ಪಿ ಯೋಗೇಶ್ವರ್ ತಿಳಿಸಿದರು.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಯೋಗೇಶ್ವರ್ 25,515 ಮತಗಳ ಭಾರೀ ಅಂತರದಿಂದ ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದು ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡು ಮಾತನಾಡಿದರು.
ನಾನು ಈ ಚುನಾವಣೆಯಲ್ಲಿ ಗೆಲುವು ನಿರೀಕ್ಷೆ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮಾಹಿತಿ ಕೊಟ್ಟಿದ್ದೆ. ನನ್ನ ನಿರೀಕ್ಷೆಗೆ ಹತ್ತಿರವಾದ ಗೆಲುವು ಸಿಕ್ಕಿದೆ,ಖುಷಿಯಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಅಂತಿಮ ದಿನಗಳನ್ನ ಎಣಿಸುತ್ತಿದೆ, ದೇವೇಗೌಡರ ಹೋರಾಟದಲ್ಲಿ ಸಾಮಾಜಿಕ ಕಳಕಳಿ ಇರಲಿಲ್ಲ, ಕೇವಲ ಸ್ವಾರ್ಥ ಇತ್ತು ಕುಟುಂಬದವರನ್ನ ಬೆಳೆಸುವ ಹೋರಾಟ ಇತ್ತು ಎಂದು ಯೋಗೇಶ್ವರ್ ಹೇಳಿದರು.
ಒಕ್ಕಲಿಗರ ನಾಯಕತ್ವವನ್ನ ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ. ಅವರ ಹಠ, ಛಲ ನೋಡಿ ನಾನು ಆಲೋಚನೆ ಮಾಡಿದ್ದೆ ಆದರೆ ಅದಕ್ಕೆ ಜನ ಸೊಪ್ಪು ಹಾಕಲಿಲ್ಲ. ನಿಖಿಲ್ ಇನ್ನೂ ಯುವಕ. ಆತನಿಗೆ ಒಳ್ಳೆಯದಾಗಲಿ ಎಂದು ಸಿಪಿವೈ ಶುಭ ಹಾರೈಸಿದರು.
ವಿಜಯೇಂದ್ರ ಅವರು ನನ್ನ ಬ್ಯಾಟರಿ ವೀಕ್ ಆಗಿದೆ ಎಂದು ಹೇಳಿದ್ದರು ಆದರೆ ಅವರ ಬ್ಯಾಟರಿ ವೀಕ್ ಆದಾಗ ನಾನು ಚಾರ್ಜ್ ಮಾಡಿದ್ದೆ. ವಿಜಯೇಂದ್ರ, ಯಡಿಯೂರಪ್ಪ ಷಡ್ಯಂತ್ರದಿಂದ ನಾನು ಎನ್ಡಿಎ ಬಿಟ್ಟೆ. ಇವತ್ತು ಹಳೇ ಮೈಸೂರು ಭಾಗದಲ್ಲಿ ಡಿ.ಕೆ ಶಿವಕುಮಾರ್ ನಾಯಕತ್ವವನ್ನು ನಮ್ಮ ಜನ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿಗೆ ಅಧಿಕಾರ ದಾಹವಿದೆ. ಹಾಗಾಗಿ ಯಾರನ್ನು ಸಹಿಸಲ್ಲ, ಅಪ್ಪನನ್ನು ಸಹಿಸಲ್ಲ, ಮಗನನ್ನು ಸಹಿಸಲ್ಲ ಎಂದು ಟೀಕಿಸಿದರು.