ಗೆಲುವಿನಲ್ಲಿಯೂ ಕಾಂಗ್ರೆಸ್ ವಿಕೃತಿ: ನಿಖಿಲ್ ಆಕ್ರೋಶ

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಪಕ್ಷ ಆ ಗೆಲುವಿನಲ್ಲಿಯೂ ವಿಕೃತಿ ಮೆರೆಯುತ್ತಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ಹೊರಬಿದ್ದ ಮೇಲೆ ಕಾರ್ಯಕರ್ತರಿಗೆ ದೀರ್ಘ ಪತ್ರ ಬರೆದಿರುವ ಅವರು; ಜೆಡಿಎಸ್ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಕಿಡಿ ಕಾರಿದ್ದಾರೆ.

ನಿಖಿಲ್‌ ಬಚ್ಚಾ, ಪಾಪ ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು ಎಂದು ಹೇಳಿದ್ದಾರೆ.

ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್‌ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು. ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುವುದಿಲ್ಲ ಎಂದು ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ ನಿಖಿಲ್

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿದ್ದ ನನ್ನ ಸೋಲು ಅನಿರೀಕ್ಷಿತ. ಸೋಲು ಯಾಕಾಯಿತೆಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ. ಹಾಗೆಂದು, ಸೋಲಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ, ನಮ್ಮ ಪಕ್ಷದ್ದೂ ಅಲ್ಲ.

ಈ ಸೋಲು ನನಗೆ ನೋವುಂಟು ಮಾಡಿದೆ, ನಿಜ. ಇಲ್ಲ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಹಾಗಂತ, ಸೋಲುತ್ತೇನೆ ಎಂದು ನಾನು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಗೆಲ್ಲಲು ಪ್ರಾಮಾಣಿಕವಾಗಿ ಹೋರಾಡಿದ್ದೇವೆ. ಕೆಲ ಅಂಶಗಳಿಂದ ಹಿನ್ನಡೆಯಾಗಿದೆ, ಮತ್ತೆ ಪುಟಿದೆದ್ದು ಬರುವ ಛಲ ನನಗಿದೆ ಎಂದು ಬರೆದಿದ್ದಾರೆ.

ನನ್ನ ಸೋಲು ನನ್ನ ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಿದೆ, ಅದು ನನಗೆ ಗೊತ್ತು, ಇಡೀ ರಾಜ್ಯದ ಕಾರ್ಯಕರ್ತರೆಲ್ಲರೂ ವೀರಯೋಧರಂತೆ ಚನ್ನಪಟ್ಟಣದಲ್ಲಿ ಹಗಲಿರಳೂ ದುಡಿದರು. ಮನೆಮನೆಯನ್ನೂ ತಲುಪಿ ನನ್ನ ಗೆಲುವಿಗಾಗಿ ಶ್ರಮಿಸಿದರು. ಅಂತಿಮವಾಗಿ ಸೋಲಾಯಿತು, ಅದು ಜನತಾ ಜನಾರ್ದನನ ನಿರ್ಣಯ. ಅದನ್ನು ನಾನು ಶಿರಬಾಗಿ ಸ್ವೀಕರಿಸಿದ್ದೇನೆ.

ವಿಪರ್ಯಾಸವೆಂದರೆ, ಗೆದ್ದವರಿಗೆ ನೆಮ್ಮದಿ ಇಲ್ಲ, ಕನಿಷ್ಠ ಗೆಲುವನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಮನಃಸ್ಥಿತಿಯೂ ಇಲ್ಲ. ಆ ಮುಖಗಳಲ್ಲಿ ನಗುವೇ ಇಲ್ಲ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಅವರು ಗೆಲುವು ಕಂಡಿದ್ದಾರೆ. ಸಂಭ್ರಮಿಸಲಿ, ವಿಜೃಂಭಣೆ ಮಾಡಿಕೊಳ್ಳಲಿ. ಅದನ್ನು ಕಂಡು ಕಣ್ಣುರಿ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ, ಆದರೆ, ಹೇಗೆ ಗೆದ್ದೆವು ಎಷ್ಟರಮಟ್ಟಿಗೆ ಅಧಿಕಾರ ದುರ್ಬಳಕೆ ಮಾಡಿಕೊಂಡೆವು ಎನ್ನುವ ಸಣ್ಣ ಆತ್ಮವಿಮರ್ಶೆಯಾದರೂ ಬೇಡವೇ? ಮತದಾನಕ್ಕೆ ಕೆಲ ಗಂಟೆಗಳು ಉಳಿದಿರುವಾಗ ಚನ್ನಪಟ್ಟಣದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ 4,000 ಹಣವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡುತ್ತೀರಿ. ಆಯಾ ತಿಂಗಳಿಗೆ ಸಕಾಲಕ್ಕೆ ಹೋಗಬೇಕಾದ ಹಣವನ್ನು ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳುವ ದುರುದ್ದೇಶಕ್ಕೆ ಏನೆನ್ನಬೇಕು ಎಂದು ಪ್ರಶ್ನಿಸಿದ್ದಾರೆ.ನಾವು ಸತ್ಯದ ಪರವಾಗಿದ್ದೇವೆ.ಸತ್ಯಮೇವ ಜಯತೆ ಎನ್ನುವುದು ನಮ್ಮ ಪಾಲಿಗೆ ಬರೀ ಜಾಹೀರಾತಿನ ಸ್ಲೋಗನ್ ಅಲ್ಲ, ರಾಷ್ಟ್ರಪಿತ ಬಾಪೂಜಿ ಹೇಳಿದ ಸತ್ಯ ಮಾರ್ಗದಲ್ಲಿಯೇ ನಡೆಯೋಣ. ಆ ಮರ್ಯಾದಾ ಪುರುಷೋತ್ತಮ ರಾಮನ ದಾರಿ ನಮ್ಮ ಆದರ್ಶ. ಶ್ರೀಕೃಷ್ಣ ಪರಮಾತ್ಮನ ಸತ್ಯನೀತಿ ನಮ್ಮ ಮುಂಬೆಳಕು. ನಾವು ಯಾರೂ ಧೃತಿಗೆಡಬೇಕಿಲ್ಲ, ನಿಮ್ಮೊಂದಿಗೆ ನಾನಿದ್ದೇನೆ. ಇಡೀ ಪಕ್ಷವೇ ಇದೆ ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ ನಿಖಿಲ್ ಕುಮಾರಸ್ವಾಮಿ.