ನ. 30ರಿಂದ ಡಿ.1ರ ವರೆಗೆ‌ ಚುಂಚನಕಟ್ಟೆ ಜಾಲಪಾತೋತ್ಸವ

ಮೈಸೂರು: ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಚುಂಚನಕಟ್ಟೆ ಜಾಲಪಾತದಲ್ಲಿ ಮೈಸೂರು ಜಿಲ್ಲಾಡಳಿತದಿಂದ ನ. 30ರಿಂದ ಡಿ.1ರ ವರೆಗೆ ಜಲಪಾತೋತ್ಸವ ಹಮ್ಮಿಕೊಳ್ಳಲಾಗಿದೆ.

ಇದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ ಎಂದು ಕೆ. ಆರ್ ನಗರದ ಶಾಸಕ ಡಿ. ರವಿಶಂಕರ್ ತಿಳಿಸಿದರು.

ನಗರದ ಜಲದರ್ಶಿನಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚುಂಚನಕಟ್ಟೆಯಲ್ಲಿ ಕಾವೇರಿ ತಾಯಿ 65 ಅಡಿ ಎತ್ತರದಿಂದ ಭೋರ್ಗರೆಯುತ್ತಾ ಮನಮೋಹಕ ಜಲಪಾತ ಸೃಷ್ಟಿಸುತ್ತಾಳೆ. ಶ್ರೀರಾಮನು ತನ್ನ ವನವಾಸ ಕಾಲದಲ್ಲಿ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದ ಎಂಬ ಇತಿಹಾಸವಿದೆ ಎಂದು ತಿಳಿಸಿದರು.

ಇಲ್ಲಿ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿ ವಿಗ್ರಹವಿದೆ. ಕರ್ನಾಟದಲ್ಲೇ ಹೆಸರುವಾಸಿಯಾದ ದನಗಳ ಜಾತ್ರೆ ಜನವರಿಯಲ್ಲಿ ನಡೆಯುತ್ತದೆ ಎಂದು ವಿವರಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ಜಲಪಾತೋತ್ಸವ ಜರುಗಲಿದೆ.ರಾಜ್ಯ ಹಣಕಾಸು ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ನಡೆಯಲಿದೆ.

ಅಂದಾಜು 20 ಸಾವಿರ ಜನರು ಸೇರಲಿದ್ದಾರೆ. ಜಲಪಾತೋತ್ಸವಕ್ಕೆ ಬರುವ ಜನರ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ ಸೌಲಭ್ಯ ಹಾಗೂ ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗುವುದು ಎಂದು ರವಿಶಂಕರ್ ತಿಳಿಸಿದರು.

ಎರಡು ದಿನಗಳ‌‌‌ ಕಾಲ ವಿವಿಧ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ.‌ ಶನಿವಾರ ಸಂಜೆ 6.30ಕ್ಕೆ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಜಲಪಾತೋತ್ಸವದ ಉದ್ಘಾಟನೆ ಮಾಡಲಿದ್ದಾರೆ.

ಅದೇ ದಿನ ಸಂಜೆ 4.30ಕ್ಕೆ ಬಸವಯ್ಯ ಮತ್ತು ತಂಡದಿಂದ ಜನಪದ ಝೇಂಕಾರ, ಸಂಜೆ 5 ಕ್ಕೆ ಡಾ.ಕಾ.ರಾಮೇಶ್ವರಪ್ಪ ತಂಡದಿಂದ ಕನ್ನಡ ಗೀತಗಳ ಡಿಂಡಿಮ, ರಾತ್ರಿ 7.30 ಕ್ಕೆ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್‌ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು‌ ಮಾಹಿತಿ ನೀಡಿದರು.

ಭಾನುವಾರ ಸಂಜೆ 4.30ಕ್ಕೆ ರಶ್ಮಿ ತಂಡದವರಿಂದ ಜನಪದ ಗೀತೆಗಳು, 5ಕ್ಕೆ ಯು.ರಾಜೇಶ್‌ ಪಡೆಯಾರ್‌ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡದಿಂದ ಸಿ.ಅಶ್ವಥ್‌ ಗೀತೆಗಳ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕಾರ್ಯಕ್ರಮ,

ಸಂಜೆ 6.30ಕ್ಕೆ ಪುಪ್ಪಾವತಿ ಖ್ಯಾತಿಯ ನಟಿ ನಿಮಿಕಾ ರತ್ನಾಕರ್‌ ಹಾಗೂ ಕಿರುತೆರೆ ನಟಿ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಅವರಿಂದ ಸ್ಯಾಂಡಲ್​ವುಡ್‌ ನೈಟ್ಸ್‌, ರಾತ್ರಿ 7.30ಕ್ಕೆ ಸಂಗೀತ ನಿರ್ದೇಶಕ ಹಾಗೂ ಗಾಯಕ ಮಣಿಕಾಂತ್‌ ಕದ್ರಿ ಮತ್ತು ಹಂಸಿಕಾ ಅಯ್ಯರ್‌ ತಂಡದವರಿಂದ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಶಾಸಕರು ಕೃಷ್ಣರಾಜ ನಗರದಲ್ಲಿರುವ ಶ್ರೀರಾಮ ಸಕ್ಕರೆ ಕಾರ್ಖಾನೆ ಮರು ಪ್ರಾರಂಭದ ಕುರಿತು ಮಾತನಾಡಿ, ಕಳೆದ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಿದೆ. ಶ್ರೀರಾಮ ಸಕ್ಕರೆ ಕಾರ್ಖಾನೆ ಜನವರಿಯೊಳಗೆ ನೋಂದಣಿ ಮಾಡಿ, ‌ಮುಂದಿನ ವರ್ಷದಿಂದ ಕಬ್ಬು ಅರೆಯಲಾಗುವುದು. ಕಾರ್ಖಾನೆ ಮರು ಪ್ರಾರಂಭದ ಬಗ್ಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಪತ್ರದ ಮೂಲಕ ಆದೇಶ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಿರಾಣಿ ಶುಗರ್ಸ್ಸ್‌ ಕಾರ್ಖಾನೆ ಮರು ಪ್ರಾರಂಭಕ್ಕೂ ಮನವಿ ಮಾಡಿದ್ದೇವೆ, ಪಾಂಡವಪುರ ಸಕ್ಕರೆ ಕಾರ್ಖಾನೆ ಅವ್ಯವಸ್ಥೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.