ಸಿಎಂ 5 ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್: ಬಿ.ಆರ್.ಪಾಟೀಲ್

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು 5 ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಸಿಎಂ ಆಪ್ತ ಸಲಹೆಗಾರ ಬಿ.ಆರ್.ಪಾಟೀಲ್  ಮಾರ್ಮಿಕವಾಗಿ ನುಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಐದು ವರ್ಷ ಇರುವರೊ ಇಲ್ಲವೊ ಗೊತ್ತಿಲ್ಲ, ಅವರು ಐದು ವರ್ಷ ಇರಬೇಕು ಅಂತಾ ನಾವು ಬಯಸುತ್ತೇವೆ,ಆದರೆ ಆಹೈಕಮಾಂಡ್ ಏನು ನಿರ್ಧಾರ ಮಾಡುತ್ತೊ ಗೊತ್ತಿಲ್ಲ, ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೆ ನಾವು ಏನೂ ಮಾಡಲು ಆಗಲಾರದು, ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತಾ ಯಾವ ಶಾಸಕರ ಮನಸ್ಸಿನಲ್ಲೂ ಇಲ್ಲ ಎಂದು ತಿಳಿಸಿದರು.

ದೊಡ್ಡ ಕನಸನ್ನು ಕಂಡು ಬಡವರ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಾಗ ಭೌತಿಕ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿಯಿಂದ ಆರ್ಥಿಕ ಹೊರೆ ಆಗದಂತೆ ಹೊಸ ಆರ್ಥಿಕ ನೀತಿಯನ್ನು ಸಿಎಂ ನೀಡುತ್ತಾರೆ ಎಂದು ಬಿ.ಆರ್.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಒಂದಾಗಿ ವಕ್ಫ್ ಬೋರ್ಡ್ ಬಗ್ಗೆ ಜನಜಾಗೃತಿ ಮಾಡಲಿ, ಅವರಲ್ಲಿಯೇ ಒಡಕಿದೆ. ನಮ್ಮನ್ನೇನು ನೋಡ್ತಾರೆ. ಇನ್ನೂ ಎಷ್ಟು ಬಣ ಇದ್ದಾವೊ ಗೊತ್ತಿಲ್ಲ. ಯರ‍್ಯಾರು ದೆಹಲಿಯಲ್ಲಿ ಕುಳಿತು ಯರ‍್ಯಾರಿಗೆ ಆಪರೇಟಿಂಗ್ ಮಾಡತ್ತಿದ್ದಾರೋ. ಯಾರ‍್ಯಾರ ಕೈಚಳಕ ಎಲ್ಲೆಲ್ಲಿದೆಯೋ ಗೊತ್ತಿಲ್ಲ. ಮುರಳಿ ಮನೋಹರ ಜೋಶಿ ಅಂತಹವರನ್ನೇ ಮೂಲೆಗುಂಪು ಮಾಡಿದರು. ಇವರೆಲ್ಲಾ ಯಾವ ಲೆಕ್ಕ ಎಂದು ಪಾಟೀಲ್ ಮಾರ್ಮಿಕವಾಗಿ ನುಡಿದರು.