ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವಕ್ಕೆ‌ ಚಾಲನೆ

ಮೈಸೂರು: ಕೆ ಆರ್‌ ನಗರ ತಾಲೂಕು ಚುಂಚನಕಟ್ಟೆ ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವಕ್ಕೆ‌ ಚಾಲನೆ ಅದ್ದೂರಿ ಚಾಲನೆ ದೊರೆಯಿತು.

ಶನಿವಾರ ರಾತ್ರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆ ಆಯೋಜಿಸಿದ್ದ ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಚಿವರು,ನಮ್ಮ ನಾಡು ನುಡಿ, ಜನರ ಆಚಾರ ವಿಚಾರ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಉತ್ಸವಗಳನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆ ಆರ್ ನಗರ ಕ್ಷೇತ್ರದ ಮೇಲೆ ಹೆಚ್ಚು ಪ್ರೀತಿ. ಇಲ್ಲಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಯನ್ನು ಖಾಸಗಿಯವರಿಗೆ ವಹಿಸಿ ಉತ್ತಮವಾಗಿ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ ವೆಂಕಟೇಶ್ ಅವರು ಮಾತನಾಡಿ ಈ ವರ್ಷ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಡ್ಯಾಂ ಗಳು ತುಂಬಿವೆ. ಜನರು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ನಾವು ಗಗನಚುಕ್ಕಿ ಭರಚುಕ್ಕಿ ಜಲಪಾತೋತ್ಸವ ಮಾಡಿದೆವು.ಈಗ ಚುಂಚನಕಟ್ಟೆ ಯಲ್ಲಿ ಹಮ್ಮಿಕೊಳ್ಳಲಾಗಿದೆ. ಇಂತಹ ಉತ್ಸವಗಳ ಮೂಲಕ ಜನರಿಗೆ ಉತ್ತಮ ಮನರಂಜನೆ ನೀಡಲಾಗುತ್ತದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಿ.ಇಲ್ಲಿನ ಶಾಸಕ ಡಿ ರವಿಶಂಕರ್ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ ಆರ್ ನಗರ ಶಾಸಕ ಡಿ ರವಿಶಂಕರ್ ಮಾತನಾಡಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಸಂದರ್ಭದಿಂದ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ,ಶ್ರೀರಾಮ ಸಕ್ಕರೆ ಕಾರ್ಖಾನೆ ಯನ್ನು ನೊಂದಣಿ ಮಾಡಿಸಿ ಮುಂದಿನ ಜನವರಿಯಿಂದ ಪ್ರಾರಂಭವಾಗುವಂತೆ‌ ಮಾಡಲಾಗುತ್ತದೆ, ಕಪ್ಪಡಿಯ ಸೇತುವೆಯನ್ನು 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ ಸಿಇಒ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.