ಐವಿ ದ್ರಾವಣ ಪೂರೈಕೆ ಹಿಂದೆ ಬಲಾಢ್ಯ ಕೈಗಳ ಪ್ರಭಾವ:ಅಶೋಕ್ ಆರೋಪ

ಬಳ್ಳಾರಿ: ಪಶ್ಚಿಮ ಬಂಗಾಳ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯ ಐವಿ ದ್ರಾವಣ ಕಳಪೆ ಎಂದು ಆರು ತಿಂಗಳ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾದರೂ, ಅದನ್ನೇ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಅಸಮಾಧಾನ ವ್ಯಕ್ತಪಡಿಸಿದರು.

ಇದರ ಹಿಂದೆ ಬಲಾಢ್ಯರ ಕೈ ಕೆಲಸ ಮಾಡಿದೆ, ಈ ಸಾವುಗಳಿಗೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.

ಬಳ್ಳಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ 10 ತಿಂಗಳಲ್ಲಿ 111 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ತಾಯಂದಿರು ಹೆರಿಗೆ ನಂತರ ಮೃತರಾಗಿದ್ದಾರೆ.ಇದರಿಂದ ಜನರಲ್ಲಿ ಆತಂಕ ಮೂಡಿದೆ.

ಇಲ್ಲಿ ಮೆಡಿಕಲ್‌ ಮಾಫಿಯಾ ಕೂಡ ಇದೆ. ಇದು ಒಂದು ಜಿಲ್ಲೆಯಲ್ಲಿ ಕಂಡುಬಂದ ಸಮಸ್ಯೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಏನಾಗಿದೆ ಎಂಬುದನ್ನು ನೋಡಬೇಕಿದೆ. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ಇಲ್ಲವಾದರೆ ನಾನೇ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದು ಅಶೋಕ್ ಎಚ್ಚರಿಸಿದರು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವಿ ದ್ರಾವಣ ನೀಡಿದ ಬಳಿಕ ತಾಯಂದಿರ ಲಿವರ್‌ ವಿಫಲವಾಗಿದೆ. ರಕ್ತದೊತ್ತಡ ಸಂಪೂರ್ಣ ಇಳಿಮುಖವಾಗಿದೆ. ಈ ದ್ರಾವಣ ಯಾರ ಪ್ರಭಾವದಿಂದ ಕರ್ನಾಟಕಕ್ಕೆ ಬಂತು ಎಂದು ನೋಡಬೇಕಿದೆ. ಹಿಂದೆ ಇದ್ದ ಡ್ರಗ್‌ ಕಂಟ್ರೋಲರ್‌ ಆರು ತಿಂಗಳ ಹಿಂದೆ ಐವಿ ದ್ರಾವಣ ಖರೀದಿಸಬಾರದು ಎಂದು ಸರ್ಕಾರಕ್ಕೆ ತಿಳಿಸಿದ್ದರು. ಬಳಸಬಾರದು ಎಂದು ಹೇಳಿದ್ದರೂ ಯಾವ ಕಾಣದ ಬಲಾಢ್ಯ ಕೈ ಇದನ್ನೇ ಖರೀದಿ ಮಾಡಬೇಕೆಂದು ಪ್ರಭಾವ ಬೀರಿದೆ ಎಂದು ನೋಡಬೇಕಿದೆ. ಈ ಕಂಪನಿಯ ಅನ್ಸಾರಿ ಎಂಬುವರು ಇಲ್ಲಿ ಪ್ರಭಾವ ಬೀರಿದ್ದು, ಈತನನ್ನು ಬಂಧಿಸಿದರೆ ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಮಾಡಬಹುದು ಎಂದು ಹೇಳಿದರು.

ಎರಡು ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡ ಅಧಿಕಾರಿಯನ್ನು ಸರ್ಕಾರ ಅಮಾನತು ಮಾಡಿ ನುಣುಚಿಕೊಂಡಿದೆ. ಸಚಿವರೇ ರಾಜೀನಾಮೆ ನೀಡಬೇಕು ಎಂದು ಅಶೋಕ್ ಒತ್ತಾಯಿಸಿದರು.

ಅಧಿಕಾರಿಗಳಾದ ಚಿದಾನಂದ ವಟಾರೆ, ರಘುನಂದನ್‌, ನಂದಿನಿ, ಶೈಲಾವತಿ ಇದನ್ನು ಶಿಫಾರಸು ಮಾಡಿದ್ದಾರೆ. 97 ಬ್ಯಾಚ್‌ಗಳಲ್ಲಿ 23 ಬ್ಯಾಚ್‌ಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ವರದಿ ನೀಡಲಾಗಿದೆ. ಔಷಧಿಯಲ್ಲಿ ಶೇ.1 ರಷ್ಟು ಕಳಪೆ ಇದ್ದರೂ ಅದು ರೋಗಿಗಳಿಗೆ ಅಪಾಯ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಕಳಪೆ ಔಷಧಿ ಇದ್ದರೂ ಅದನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಇದರ ಹಿಂದೆ ಸರ್ಕಾರವೇ ಇದೆ ಎಂದು ಅಶೋಕ್ ದೂರಿದರು.

ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ. ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಕಾಣೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಗೆ ಬಂದರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾತ್ರ ಇವರ ಕಾರ್ಯಕ್ರಮ ಎಂದು ವಾಗ್ದಾಳಿ ನಡೆಸಿದರಲ್ಲದೆ ಮೃತಪಟ್ಟ ಪ್ರತಿ ಸಂತ್ರಸ್ತರಿಗೂ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.