ರೈತರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ -ಬಿ.ಎಸ್.ವೈ.

ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ ವೈ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಾನು ರೈತರ ಆಶೀರ್ವಾದದಿಂದ 4ನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಒಂದು ವೇಳೆ ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ನಾನು ಕುಳಿತುಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.
ನನ್ನಿಂದ ರೈತರಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಮೊದಲು ಬೇರೆ ಜಿಲ್ಲೆಗಳಲ್ಲಿ ಮಾರಾಟ ಮಾಡಿದರೆ ಅವರ ವಿರುದ್ಧ ದೂರು ದಾಖಲಾಗುತ್ತಿತ್ತು. ಈಗ ಅದನ್ನು ತೆಗೆದು ಹಾಕಲಾಗಿದೆ.
ನೀರಾವರಿ ಭೂಮಿಯನ್ನು ಖರೀದಿಸಿದವರು ಅದರಲ್ಲಿ ಕೃಷಿಯನ್ನೇ ಮಾಡಬೇಕು. ಇತರ ಚಟುವಟಿಕೆಗಳಿಗೆ ಉಪಯೋಗಿಸುವಂತಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಭೂಮಿಯನ್ನು ಖರೀದಿಸಲು ಅವಕಾಶವಿಲ್ಲ ಈ ತಿದ್ದುಪಡಿಯಿಂದ ಸಾಧ್ಯವಿಲ್ಲ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದರಿಂದ ಅನಾನುಕೂಲ ಆಗುವುದಿಲ್ಲ ಎಂದು ಸಿಎಂ ವಿವರಿಸಿದರು.
ರಾಜ್ಯದಲ್ಲಿ 20 ಲಕ್ಷ ಎಕರೆ ಬಂಜರು ಭೂಮಿ ಇದೆ. ಇಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ. ಇಂತಹ ಭೂಮಿಯನ್ನು ಮಾತ್ರ ಕೈಗಾರಿಕೆಗಳಿಗೆ ನೀಡಲಾಗುವುದು ಇದರಿಂದ ಸಾವಿರಾರು ಮಂದಿ ಯುವಜನರಿಗೆ ಉದ್ಯೋಗ ಸಿಗುತ್ತದೆ ಎಂದರು.
ಅನ್ನದಾತರ ಭವಿಷ್ಯದ ದೃಷ್ಟಿಯಿಂದ ಈ ಬಗ್ಗೆ ಚರ್ಚಿಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ಎಂದು ಸಿಎಂ ಹೇಳಿದರು.