ಜನಕಲ್ಯಾಣೋತ್ಸವದ ಯಶಸ್ಸು ಆನೆಬಲ ತಂದಿದೆ-ಸಿದ್ದರಾಮಯ್ಯ

ಹಾಸನ: ಹಾಸನದಲ್ಲಿ ಆಯೋಜಿಸಿದ್ದ ಜನಕಲ್ಯಾಣೋತ್ಸವದ ಅಭೂತಪೂರ್ವ ಯಶಸ್ಸು ಕಂಡಿದೆ,ಇದು ನನಗೆ ಆನೆಬಲ ನೀಡಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮನದುಂಬಿ ನುಡಿದರು.

ಜನಕಲ್ಯಾಣೋತ್ಸವ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿಎಂ,ನನ್ನ ಮತ್ತು ಪಕ್ಷದ ಮೇಲಿನ ಪ್ರೀತಿಯಿಂದ ಬಹಳ ದೂರದ ಊರುಗಳಿಂದ ಆಗಮಿಸಿ, ಅನ್ಯಾಯ, ಅಪಪ್ರಚಾರ,
ದ್ವೇಷರಾಜಕಾರಣದ ವಿರುದ್ಧದ ನನ್ನ ದನಿಗೆ ದನಿಗೂಡಿಸಿದ್ದೀರಿ, ನನ್ನ ಎಲ್ಲಾ ಅಭಿಮಾನಿಗಳು,ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರಿಗೆ ನಾನು ಚಿರೃಣಿ ಎಂದು ಕೃತಜ್ಞತೆ ಸಲ್ಲಿಸಿದರು

ಈ ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ಶೋಷಿತ ಸಮುದಾಯಗಳ ಸಂಘಟನೆಗಳು ಮತ್ತು ಪಕ್ಷದ ನಾಯಕರಿಗೆ ಅನಂತ ಧನ್ಯವಾದಗಳು ಎಂದು ಹೇಳಿದರು.

ಜನತೆಯ ಸೇವೆಯೇ ಜನಾರ್ಧನನ ಸೇವೆ. ಅಧಿಕಾರವೆಂಬುದು ಜನಸೇವೆ ಮಾಡಲು ಒದಗಿಬಂದ ಅವಕಾಶ ಎಂದು ಪ್ರಾಮಾಣಿಕವಾಗಿ ನಂಬಿದವನು ನಾನು ಎಂದು ಸಿದ್ದು ತಿಳಿಸಿದರು.

ಸತ್ಯ, ಧರ್ಮ ಮತ್ತು ನ್ಯಾಯದ ನಡಿಗೆಯಲ್ಲಿ ನನ್ನ ಜೊತೆ ಈ ನಾಡಿನ ಪ್ರಜ್ಞಾವಂತರು, ಶೋಷಿತ ಜನರು ಇದ್ದಾರೆ ಎಂಬುದಕ್ಕೆ ಇಂದು ಸೇರಿರುವ ಜನಸಾಗರ ಸಾಕ್ಷಿ ಎಂದು ಹೇಳಿದರು.

ನಿಮ್ಮೆಲ್ಲರ ಪ್ರೀತಿ – ಆಶೀರ್ವಾದ ಇರುವ ವರೆಗೆ ರಾಜಕೀಯ ವಿರೋಧಿಗಳ ಯಾವ ಷಡ್ಯಂತ್ರ, ಬೆದರಿಕೆಗಳಿಗೆ ನಾನು ಜಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ,
ಎಲ್ಲವನ್ನೂ ಎದುರಿಸಿ ಗೆಲ್ಲುತ್ತೇನೆ, ನಾನು ಸತ್ಯದ ಪರವಾಗಿದ್ದೇನೆ, ಅಂತಿಮವಾಗಿ ಗೆಲ್ಲುವುದು ಸತ್ಯವೇ ಹೊರತು ಬೇರೇನಲ್ಲ ಎಂದು ಸಿದ್ದರಾಮಯ್ಯ ನುಡಿದರು.