50 ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್ ಕೊಡುಗೆ ಏನು: ರೇವಣ್ಣ ಪ್ರಶ್ನೆ

ನವದೆಹಲಿ: ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್‌ನವರ ಕೊಡುಗೆ ಏನು ಎಂದು ಶಾಸಕ ಹೆಚ್.ಡಿ ರೇವಣ್ಣ ಪ್ರಶ್ನಿಸಿದರು.

ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಹೇಳಿದರು.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಹಾಸನದ ಕಾಂಗ್ರೆಸ್ ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ, ಶಕ್ತಿ ಪ್ರದರ್ಶನ ನಡೆಯುತ್ತಿದೆ. ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್‌ನವರ ಕೊಡುಗೆ ಏನು,ಅವರಿಂದ ಹಾಸನದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ದೂರಿದರು.

ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ, ಅರಸೀಕೆರೆ ರೈಲು ಮಾರ್ಗ ಇರುತ್ತಿರಲಿಲ್ಲ, ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಈಗ ಏನು ಮಾತನಾಡಲ್ಲ 2028ಕ್ಕೆ‌ ಚುನಾವಣೆ ವೇಳೆ ಮಾತನಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಿಕೊಳ್ಳಲಿ ಇದು ನಮ್ಮ ಮೇಲೆ ಪರಿಣಾಮ ಬೀರುವುಲ್ಲ ಎಂದು ಟಾಂಗ್ ನೀಡಿದರು.

ಜನರ ದೇವರ ಆಶೀರ್ವಾದ ಇದೆ. ಜೆಡಿಎಸ್ ಕಂಡರೆ ಕಾಂಗ್ರೆಸ್‌ನವರಿಗೆ ಭಯ. 2018ರಲ್ಲಿ ಯಾರು ಬಂದು ಕಾಲು ಕಟ್ಟಿದ್ದರೋ, ಹದಿನಾಲ್ಕು ತಿಂಗಳು ಆದಮೇಲೆ ಸರ್ಕಾರ ಯಾರು ತೆಗೆದರು, ಹಾಸನದಲ್ಲಿ ಲೋಕಸಭೆ ಚುನಾವಣೆ ಹೇಗಾಯಿತು, ಕಡೆಯ ಮೂರು ದಿನದಲ್ಲಿ ಏನಾಯಿತು, 2028 ರಣರಂಗದಲ್ಲಿ ಎಲ್ಲವೂ ಗೊತ್ತಾಗುತ್ತದೆ. ಸಮಯ ಬಂದಾಗ ಮಾತನಾಡುತ್ತೀನಿ ಎಂದು ರೇವಣ್ಣ ಮಾರ್ಮಿಕವಾಗಿ ನುಡಿದರು.

ಚನ್ನಪಟ್ಟಣದಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಅಭ್ಯರ್ಥಿ ಇರಲಿಲ್ಲ ಬಿಜೆಪಿಯಿಂದ ಕರೆ ತಂದರು. ಜೆಡಿಎಸ್ ಹಾಗೂ ದೇವೇಗೌಡರನ್ನು ಮುಗಿಸಲು ಯಾರಿಂದಲು ಸಾಧ್ಯವಿಲ್ಲ, ಸಮಾವೇಶದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಇದಕ್ಕೆಲ್ಲ ಹೆದರಿ ಓಡುವ ಜಯಮಾನ ನನ್ನದಲ್ಲ ಎಂದು ತಿಳಿಸಿದರು.