ಉಗ್ರ ಮಸೂದ್ ಅಜರ್ ವಿರುದ್ಧ ಕ್ರಮಕೈಗೊಳ್ಳಿ:ಪಾಕ್ ಗೆ ಭಾರತ ಒತ್ತಾಯ

ನವದೆಹಲಿ: ನಿಷೇಧಿತ ಭಯೋತ್ಪಾದನಾ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಹಾಗೂ 2011ರ ಸಂಸತ್ ದಾಳಿಯಂತಹ ಭಯೋತ್ಪಾದಕ ಕೃತ್ಯಗಳ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದ ಇಸ್ಲಾಮಿಕ್ ಸೆಮಿನರಿಯಲ್ಲಿ ಅಜರ್ ಸಾರ್ವಜನಿಕ ಭಾಷಣ ಮಾಡಿದ್ದಾನೆ.ಭಾರತದ ಮೇಲೆ ದಾಳಿಯನ್ನು ಮುಂದುವರೆಸಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾನೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾನೆ. ಆತನ ಭಾಷಣದ ವರದಿ ಆಧರಿಸಿ ಭಾರತ ಅಜರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ವನ್ನು ಆಗ್ರಹಿಸಿದೆ.

ಅಜರ್‌ನ ಭಾಷಣದ ವರದಿಗಳನ್ನು ಉಲ್ಲೇಖಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇದು ನಿಜವಾಗಿದ್ದರೆ, ಗಡಿಯಾಚೆಗೆ ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕರನ್ನು ಒಳಗೊಂಡಿರುವ ಪಾಕಿಸ್ತಾನದ ದ್ವಂದ್ವ ನಿಲುವನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

ಮಸೂದ್ ಅಜರ್ ಭಾರತದಲ್ಲಿನ ಗಡಿಯಾಚೆಗಿನ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಆದ್ದರಿಂದ ಅವನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು. ಆದರೆ, ಅವನು ಪಾಕಿಸ್ತಾನದಲ್ಲಿ ಇಲ್ಲ ಎಂದು ಆ ದೇಶ ಹೇಳಿದೆ. ಆದರೆ, ವರದಿಗಳನ್ನು ನಂಬುವುದಾದರೆ, ಅದು ಪಾಕಿಸ್ತಾನದ ದ್ವಂದ್ವವನ್ನು ಬಹಿರಂಗಪಡಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯನ್ನು ಹೆಚ್ಚಿಸುವುದಾಗಿಯೂ ಅಜರ್ ಘೋಷಿಸಿದ್ದಾನೆ,ಈತ ಈ ಭಾಷಣವನ್ನು ನವೆಂಬರ್‌ನಲ್ಲಿ ಮಾಡಲಾಗಿದೆ ಎಂದು ವರದಿಯಾಗಿದೆ.