ಸಹದ್ಯೋಗಿ ನೀಡಿದ ಕಿರುಕುಳದಿಂದ ಮನೆಬಿಟ್ಟು ಹೋಗಿದ್ದ ಕಂಡಕ್ಟರ್ ಶವ ಪತ್ತೆ

ಮೈಸೂರು: ಸಾಲದ ಹಣ ವಸೂಲಿಗಾಗಿ ಸಹದ್ಯೋಗಿ ನೀಡಿದ ಕಿರುಕುಳದಿಂದ ಬೇಸತ್ತು ಮನೆಬಿಟ್ಟು ಹೋಗಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಕಂಡಕ್ಟರ್ ಶವವಾಗಿ ಪತ್ತೆಯಾಗಿದ್ದಾರೆ.

ಅದೂ ಹತ್ತು ದಿನಗಳ ನಂತರ ವರುಣಾ ಕಾಲುವೆಯಲ್ಲಿ ಕಂಡಕ್ಟರ್ ಶವ‌ ಪತ್ತೆಯಾಗಿದ್ದು ಈ ಸಾವಿನ ಹಿಂದೆ ಹಲವು ಅನುಮಾನಗಳು ಕಾಡುತ್ತಿದೆ.

ಕುವೆಂಪುನಗರ ಬಸ್ ಡಿಪೋದಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ ಯಲ್ಲಪ್ಪ ಅವರ ಶವ ಪತ್ತೆಯಾಗಿದ್ದು,ಇದು ಆತ್ಮಹತ್ಯೆಯೋ, ಕೊಲೆಯೊ ಎಂಬ ಅನುಮಾನ ಕಾಡುತ್ತಿದೆ.

ಶ್ರೀಕಾಂತ ಅವರ ಸಾವಿಗೆ ಕಾರಣವಾಗಿರುವ ಸಹದ್ಯೋಗಿ ಗುರುರಾಜ ಉಪಾಸ ಹಾಗೂ ಇವರ ಸ್ನೇಹಿತ ಸುಭಾಷ್ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಕಾಂತ ಯಲ್ಲಪ್ಪ ಅವರು ತಮ್ಮ ವಿಕಲಚೇತನ ಮಗನ ಚಿಕಿತ್ಸೆಗಾಗಿ ಸಹದ್ಯೋಗಿ ಗುರುರಾಜ್ ಉಪಾಸ ಬಳಿ 3 ಲಕ್ಷ ಸಾಲ ಪಡೆದಿದ್ದರು.ಶೇ 5 ರಷ್ಟು ಬಡ್ಡಿ ಹಣ ಕಟ್ಟುತ್ತಿದ್ದರು.ಸುಮಾರು ತಿಂಗಳು ಬಡ್ಡಿ ಹಣ ಕಟ್ಟಿದ್ದಾರೆ.ಈ ಮಧ್ಯೆ ಅಸಲು ಹಣ ತೀರಿಸುವಂತೆ ಗುರುರಾಜ್ ಉಪಾಸ ಪಟ್ಟು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಹಣ ತೀರಿಸದಿದ್ದರೆ ನೀನು ಸಾಯುವುದೇ ಮೇಲು ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.ಈ ವೇಳೆ ಸಂಬಂಧಿಕರೊಬ್ಬರು 2 ಲಕ್ಷ ಪಾವತಿಸಿ ಉಳಿದ ಹಣಕ್ಕೆ ಸಮಯ ಪಡೆದಿದ್ದರು.

ಮತ್ತೆ 5 ಲಕ್ಷ ಹಣ ನೀಡುವಂತೆ ಪೀಡಿಸಿದ್ದಾರೆ.ಆಗಾಗ ಮನೆಗೆ ಬರುತ್ತಿದ್ದ ಗುರುರಾಜ್ ಉಪಾಸ ಹಣಕ್ಕಾಗಿ ಮಾನಸಿಕವಾಗಿ ಹಿಂಸಿಸಿ ನಿಂದಿಸಿದ್ದಾರೆ.ಇದರಿಂದ ಬೇಸತ್ತ ಶ್ರೀಕಾಂತ್ ಯಲ್ಲಪ್ಪ ಮನೆ ಬಿಟ್ಟು ಹೋಗಿದ್ದರು,ಅತ್ತ ಕೆಲಸಕ್ಕೂ ಹೋಗಿಲ್ಲ.ಮನೆಗೂ ಹಿಂದಿರುಗಿಲ್ಲ.

10 ದಿನಗಳ ನಂತರ ಶ್ರೀಕಾಂತ್ ಯಲ್ಲಪ್ಪ ರವರ ಮೃತದೇಹ ಕಿರಾಳು ಗ್ರಾಮದ ವರುಣಾ ಉಪ ನಾಲೆಯಲ್ಲಿ ದೊರೆತಿದೆ.

ಗುರುರಾಜ ಉಪಾಸ ಅವರ ಕಿರುಕುಳಕ್ಕೆ ಬೆಸತ್ತು ಮನೆ ಬಿಟ್ಟ ಶ್ರೀಕಾಂತ ಯಲ್ಲಪ್ಪ ಡೆತ್ ನೋಟ್ ಬರೆದು ಹೊರಟಿದ್ದಾರೆ. ಕೆಲವು ದಿನಗಳ ನಂತರ ಡೆತ್ ನೋಟ್ ಮನೆಯವರಿಗೆ ದೊರೆತಿದೆ.ಇದರಲ್ಲಿ ಗುರುರಾಜ್ ಉಪಾಸ ಹೆಸರು ಉಲ್ಲೇಖಿಸಿದ್ದಾರೆ.

ನಾನು ಹೆಚ್ಚುಕಮ್ಮಿ ಮಾಡಿಕೊಂಡರೆ ಗುರುರಾಜ್ ಉಪಾಸ ಕಾರಣ ಎಂದು ಬರೆದಿದ್ದಾರೆ.ಮರಣೋತ್ತರ ಪರೀಕ್ಷೆಯಲ್ಲಿ ಮಧ್ಯಪಾನದ ಜೊತೆಗೆ ವಿಷ ಬೆರೆಸಿ ಸೇವಿಸಿರುವುದು ಪತ್ತೆಯಾಗಿದೆ.

ವಿಷ ಬೆರೆಸಿ ಕುಡಿದಿದ್ದರೆ ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು ಹೇಗೆ, ಆತ್ಮಹತ್ಯೆ ಮಾಡಿಕೊಳ್ಳು ವಂತಿದ್ದರೆ ವಿಷ ಸೇವಿಸಿ ಮನೆಯಲ್ಲೇ ಮಾಡಿಕೊಳ್ಳ ಬಹುದಿತ್ತು ಎಂಬುದು ಮನೆಯವರ ವಾದ.

ಒಟ್ಟಾರೆ ಶ್ರೀಕಾಂತ ಯಲ್ಲಪ್ಪ ಅವರ ಸಾವು ಅನುಮಾನ ಮೂಡಿಸುತ್ತಿದೆ.ವರುಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ನ್ಯಾಯಾಲಯದ ಆದೇಶದಂತೆ ಉದಯಗಿರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಹಣಕ್ಕಾಗಿ ಪೀಡಿಸಿದ ಗುರುರಾಜ ಉಪಾಸ ರನ್ನ ಪೊಲೀಸರು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳ ಬೇಕು,ತಮಗೆ ನ್ಯಾಯ ದೊರಕಿಸಿಕೊಡ ಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.