ಮುಡಾ ಅಕ್ರಮ:ಮತ್ತೊಂದ ಪ್ರಕರಣ ಬಯಲು

ಮೈಸೂರು: ಮುಡಾ ಅಕ್ರಮ ಹಗರಣ ಕುರಿತು ಲೋಕಾಯುಕ್ತ ತನಿಖೆ ನಡೆಯತ್ತಿರುವಾಗಲೆ ಮತ್ತೊಂದ ಪ್ರಕರಣ ಬಯಲಾಗಿದೆ.

ಭೂಮಿಯನ್ನೇ ವಶಕ್ಕೆ ಪಡೆಯದೆ ಕೋಟ್ಯಾಂತರ ರೂ. ಮೌಲ್ಯದ ಸೈಟ್ ಗಳನ್ನ ನೀಡಿದ ಮತ್ತೊಂದು ಪ್ರಕರಣ ಬಯಲಾಗಿದೆ.

ಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್ ಅವರು ಸುಳ್ಳು ದಾಖಲೆ ಸೃಷ್ಠಿಸಿ 50:50 ಯಲ್ಲಿ ಸೈಟ್ ಗಳನ್ನ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ
ಈ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ, ವಕೀಲ ರವಿಕುಮಾರ್, ಮುಡಾ ಮಾಜಿ ಉದ್ಯೋಗಿ ಪಿ.ಎಸ್.ನಟರಾಜ್ ಮಾತನಾಡಿದರು.

ನಾನು ಕೇವಲ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿಲ್ಲ. ಮುಡಾ ಪ್ರಕರಣದಲ್ಲಿ ಜೆಡಿಎಸ್ ವಿರುದ್ಧವೂ ಹೋರಾಡಿದ್ದೆ. ಈಗ ಬಿಜೆಪಿ ವಿರುದ್ಧವೂ ಹೋರಾಟ ಮಾಡುತ್ತಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

ಮುಡಾ 50:50 ಹಗರಣ ಪ್ರಕರಣ ಸಂಬಂಧ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಸಿ.ರಮೇಶ್ ಅಕ್ರಮ ಎಸಗಿದ್ದಾರೆ. ಮುಡಾದ 50:50 ಅನುಪಾತದಲ್ಲಿ ಅಕ್ರಮವಾಗಿ ಸೈಟ್ ಪಡೆದಿದ್ದಾರೆ.

ಎಂ.ಸಿ.ರಮೇಶ್ ವಿರುದ್ಧ ಮೊದಲ ಐಟಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ‌ ಸಿಬಿಐಗೂ ಕೂಡ ವರ್ಗಾವಣೆ ಆಗುತ್ತದೆ. ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲೇಬೇಕು ಎಂದು ಅವರು ಒತ್ತಾಯಿಸಿದರು.

ಮುಡಾವನ್ನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಂದು ತೆಗೆದು ಹಾಕಿ. ಉಳ್ಳವರ ಆಸ್ತಿ ರಕ್ಷಣೆಯ ಪ್ರಾಧಿಕಾರ ಎಂದು ಮಾಡಿಬಿಡಲಿ ಎಂದು ಕೃಷ್ಣ ಟೀಕಿಸಿದರು.

ಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್ ವಿರುದ್ಧ ಕಿಡಿ ಕಾರಿದ ವಕೀಲ ರವಿಕುಮಾರ್, ಮುಡಾದ ಪಾದಯಾತ್ರೆಯಲ್ಲಿ ರಮೇಶ್ ಭಾಗಿಯಾಗಿದ್ದರು. ದೊಡ್ಡ ದೊಡ್ಡ ವಿಪಕ್ಷ ನಾಯಕರ ಜೊತೆ ಬೆಂಗಳೂರಿನಿಂದ ಮೈಸೂರಿಗೆ ಹೆಜ್ಜೆ ಹಾಕಿದ್ದರು. ಮುಡಾದ ಅಕ್ರಮ ಕುರಿತು ತನಿಖೆ ನಡೆಸಿ ಎಂದು ಪ್ರತಿಭಟನೆಯಲ್ಲಿ‌ ಭಾಗಿಯಾಗಿ ನಾಟಕವಾಡಿದ್ದಾರೆ. ಮಗನನ್ನೇ ಅಪ್ಪ ಮಾಡಿ ಮುಡಾ ಸೈಟ್ ಪಡೆದುಕೊಂಡಿದ್ದಾರೆ.1994 ರಲ್ಲಿ ವಶಪಡಿಸಿಕೊಳ್ಳಲಾಗಿದೆ‌ ಎಂಬ ಭೂಮಿ 2023ಕ್ಕೆ ಜಿಪಿಎ, 30 ವರ್ಷದ ಬಳಿಕ ಎಂ.ಸಿ‌.ರಮೇಶ್ ಎಂಬವರಿಗೆ ಭೂಮಿ ಜಿಪಿಎ ಮಾಡಲಾಗಿದೆ. ಕೇವಲ 3000 ರೂಪಾಯಿಗೆ ಅಧಿಕಾರಿಗಳು ಕ್ರಯ ಮಾಡಿಕೊಟ್ಟಿದ್ದಾರೆ.60/90 ಅಳತೆಯ ಎರಡು ಸೈಟ್ ನೀಡಿರುವ ಮುಡಾದ ಏಕೈಕ ಪ್ರಕರಣ ಇದಾಗಿದೆ ಎಂದು ಹೇಳಿದರು.

50:50 ಪ್ರಕರಣದಲ್ಲಿ 50/60 ಗಿಂತ ದೊಡ್ಡ ಅಳತೆಯ 20/30 ಗಿಂತ ಚಿಕ್ಕ ಅಳತೆಯ ಸೈಟ್ ನೀಡುವಂತಿಲ್ಲ. ಈ ಮೂಲಕ ಮುಡಾದ ನಿಯಮಾವಳಿ ಗಳನ್ನ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ಬಸವನಹಳ್ಳಿ ಸರ್ವೆ ನಂಬರ್ 121ರಲ್ಲಿ 1 ಎಕರೆ 2 ಗುಂಟೆ ಕಳೆದುಕೊಂಡಿದ್ದಾರೆಂದು‌ ಸುಳ್ಳು ದಾಖಲೆ ಸೃಷ್ಠಿಸಿ, ಮುಡಾ ಮಾಲೀಕರಾದ ಮೇಲೆ 30 ವರ್ಷದ ಬಳಿಕ ಎಂ.ಸಿ.ರಮೇಶ್ ಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ವಿಜಯನಗರ ಎರಡನೇ ಹಂತದಲ್ಲಿ ಅಡಿಗೆ 10 ಸಾವಿರಕ್ಕೂ‌ ಹೆಚ್ವು ಬೆಲೆ ಬಾಳುವ ಸೈಟ್ ಗಳು ಕೇವಲ 3 ಸಾವಿರ ರೂಪಾಯಿಗೆ ನೀಡಿದ್ದಾರೆ. 60/90 ಅಳತೆಯ ಸೈಟ್ ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ವಕೀಲ ರವಿಕುಮಾರ್ ಹೇಳಿದರು.

ಮುಡಾದ ಮಾಜಿ ಉದ್ಯೋಗಿ ಪಿ.ಎಸ್.ನಟರಾಜ್ ಮಾತನಾಡಿ, ಎಂ.ಸಿ.ರಮೇಶ್ ಎಂಬವರು ರೈತರಿಗೆ ವಂಚನೆ ಮಾಡಿದ್ದಾರೆ. ಭೂಮಿ ಕಳೆದುಕೊಂಡ‌ ರೈತನಿಗೆ ನೀಡುವ ಬದಲು ಜಿಪಿಎ ಪಡೆದುಕೊಂಡು ನಿವೇಶನ ಪಡೆದುಕೊಂಡಿದ್ದಾರೆ, ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಎಂದು ದೂರಿದರು.

ನಿವೃತ್ತ ನೌಕರರ ಸಂಘದಿಂದ ರಮೇಶ್ ಅವರಲ್ಲಿ‌ ಮನವಿ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಕುಟುಂಬ ಸೈಟ್ ವಾಪಸ್ ನೀಡಿದ ರೀತಿ ವಾಪಸ್ ನೀಡಿ ಎಂದು ಪತ್ರ ಬರೆಯಲಾಗುತ್ತದೆ. ಅವರು ನಮ್ಮ ಅಹವಾಲು ಸ್ವೀಕರಿಸಬೇಕು. ಇಲ್ಲವಾದರೆ ಅವರ ಸವಾಲನ್ನ ನಾವು ಸ್ವೀಕರಿಸುತ್ತೇವೆ. ಅವರ ಮನೆಯ ಎದುರು ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಮುಡಾಗೆ ಪ್ರತ್ಯೇಕ ಕಾಯ್ದೆ ರಚಿಸುವ ಸರ್ಕಾರದ ತೀರ್ಮಾನ ನಿಜಕ್ಕೂ ಸಂತೋಷದ ವಿಚಾರ. ಮುಡಾದಿಂದ ರಾಜಕಾರಣಿಗಳನ್ನ ದೂರವಿಡಿ ಎಂದು ಹೇಳಿದರು.