ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಸಂವಿಧಾನಿಕ ಪದಬಳಕೆ ಮಾಡಿದ ಆರೋಪದಲ್ಲಿ ಬಂಧನವಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿದರು.
ಶುಕ್ರವಾರ 5ನೇ ಸಿವಿಲ್ ಅಂಡ್ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಲಾಯಿತು.
ಕಲಂ 481 ಅಡಿ ವಕೀಲರು ಬೇಲ್‌ಗೆ ಅರ್ಜಿ ಸಲ್ಲಿಸಿದರು. ಕೋರ್ಟ್‌ಹಾಲ್‌ನಲ್ಲಿ ಸಿ.ಟಿ ರವಿ ಕಣ್ಣೀರು ಹಾಕಿದರು. ಈ ವೇಳೆ ಅವರಿಗೆ ಆರ್. ಅಶೋಕ್, ಅಭಯ್ ಪಾಟೀಲ್ ಸಾಂತ್ವನ ಹೇಳಿದರು.
ನಂತರ ನ್ಯಾಯಾಧೀಶರಾದ ಸ್ಪರ್ಶಾ ಎಂ ಡಿಸೋಜಾ ಎದುರು ವಾದ ಮಂಡಿಸಿದ ಸಿ.ಟಿ ರವಿ ಪರ ವಕೀಲರಾದ ಎಮ್.ಬಿ ಜಿರಲಿ ಮತ್ತು ರವಿರಾಜ್ ಪಾಟೀಲ್ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದರು.
ಅದಕ್ಕೆ ನ್ಯಾಯಾಧೀಶರು ಎಲ್ಲಿ ಅರೆಸ್ಟ್ ಆಯ್ತು, ಎಷ್ಟು ಗಂಟೆಗೆ ಆಯ್ತು, ಎಲ್ಲೆಲ್ಲಿಗೆ ಕರೆದುಕೊಂಡಿ ಹೋಗಿದ್ದರು ಏನು ಮಾಡಿದರು, ತೊಂದರೆ ಕೊಟ್ರಾ ಎಂದೆಲ್ಲಾ ಪ್ರಶ್ನಿಸಿದರು.
ಕಟಕಟೆಯಲ್ಲಿ ನಿಂತು ಉತ್ತರಿಸಿದ ಸಿ.ಟಿ ರವಿ,ಗದಗ, ಧಾರವಾಡ, ಸವದತ್ತಿ, ರಾಮದುರ್ಗದಲ್ಲಿ ನನ್ನ ಸುತ್ತಾಡಿಸಿದರು. ಖಾನಾಪುರ ಪೊಲೀಸರು ನನ್ನನ್ನ ಹೊಡೆದರು, ಕಬ್ಬಿನ ಗದ್ದೆಯಲ್ಲಿ ನಿಲ್ಲಿಸಿದ್ದರು. ಪೊಲೀಸರು ನನಗೆ ಮಾನಸಿಕ, ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ, ಮೊಬೈಲ್ ಜೊತೆಗೆ ವಾಚ್ ಕೂಡ ಕಿತ್ತುಕೊಂಡರು ಎಂದು ಆರೋಪಿಸಿದರು.
ಪ್ರತಿ 10 ನಿಮಿಷಕ್ಕೆ ಪೊಲೀಸರಿಗೆ ಯಾರೋ ಫೋನ್ ಮಾಡುತ್ತಿದ್ದರು,ಯಾವ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ, ಅನ್ನೋ ಮಾಹಿತಿ ಕೂಡ ಕೊಡಲಿಲ್ಲ, ನನ್ನ ಕುಟುಂಬಕ್ಕೂ ಕೂಡ ಮಾಹಿತಿ ನೀಡಲಿಲ್ಲ ಎಂದು ಭಾವುಕರಾದರು.
ನನ್ನ ಮೇಲೆ ಮೂರು ಬಾರಿ ಅಟ್ಯಾಕ್ ಆಯಿತು. ಝಿರೋ ಎಫ್‌ಐಆರ್ ಮಾಡಿ ಎಂದು ಕೇಳಿದೆ ಅದನ್ನು ಮಾಡಲಿಲ್ಲ. ಮಿನಿಸ್ಟರ್ ವಿರುದ್ಧ ಕೇಸ್ ಮಾಡದೇ ಇರುವುದು ಅಪರಾಧ. ಎರಡೂವರೆ ಗಂಟೆ ಯಾವ ನಾಯಕರನ್ನು ಒಳಗಡೆ ಬಿಟ್ಟಿಲ್ಲ. ಮಧ್ಯಾಹ್ನ ಕಾರಿಡಾರ್‌ನಲ್ಲಿ ನಿನ್ನ ಹೆಣವೂ ಚಿಕ್ಕಮಗಳೂರಿಗೆ ಹೋಗಲ್ಲ ಅಂತ ಮಂತ್ರಿಯೊಬ್ಬರು ಧಮ್ಕಿ ಹಾಕಿದರು. ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿ.ಕೆ ಶಿವಕುಮಾರ್ ನಿನ್ನನ್ನ ನೋಡಿ ಕೊಳ್ಳುತ್ತೇನೆ ಅಂದ್ರು. ಇದೆಲ್ಲವನ್ನೂ ನೋಡಿ ನಾನು ರಾತ್ರಿಯಿಡಿ ಆತಂಕದಲ್ಲಿದ್ದೆ ಎಂದು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡರು.
ಇದಕ್ಕೆ ದನಿಗೂಡಿಸಿದ ವಕೀಲ ಜಿರಲಿ, ನ್ಯಾಯಾಂಗದ ಸಮಯ ವ್ಯರ್ಥವಾಗುತ್ತದೆ ಅಲ್ಲದೇ ನನ್ನ ಕಕ್ಷಿದಾರರ ಮಾನಸಿಕ ಹಾಗು ದೈಹಿಕ ಆರೋಗ್ಯ ಹಾಳಾಗಬಹುದು. ಸ್ಪೀಕರ್ ಸಾವಿಂಧಾನಿಕ ಹೆಡ್ ಇರುತ್ತಾರೆ, ಸ್ಪೀಕರ್‌ಗೆ ಎಲ್ಲವೂ ಗೊತ್ತಿದೆ, ಅಲ್ಲಿ ಯಾವುದೇ ಡಿಸಿಶನ್ ಸ್ಪೀಕರ್ ತೆಗೆದುಕೊಂಡಿಲ್ಲ. ಮೊದಲು ನನ್ನ ಕಕ್ಷಿದಾರನಿಗೆ ಮೆಡಿಕಲ್ ಟ್ರೀಟ್‌ಮೆಂಟ್ ಬೇಕಾಗಿದೆ, ಹೀಗಾಗಿ ಜಾಮೀನು ನೀಡಬೇಕೆಂದು ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.