ಕೊಟ್ಟಿಗೆ ಬೀಗ ಮುರಿದು 2 ಲಕ್ಷ ರೂ. ಮೌಲ್ಯದ ಜಾನುವಾರು ಕದ್ದ ಕಿರಾತಕರು

ಮೈಸೂರು: ಮನೆಗೆ ಹೊಂದಿಕೊಂಡಿರುವ ಜಾನುವಾರುಗಳ ಕೊಟ್ಟಿಗೆಯ ಬೀಗ ಮುರಿದು 2 ಲಕ್ಷ ರೂ. ಮೌಲ್ಯದ 9 ಟಗರು,  ಮೇಕೆಗಳನ್ನು ದುಷ್ಕರ್ಮಿಗಳು ಕಳವು  ಮಾಡಿರುವ ಕ್ಷುಲ್ಲಕ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ‌ ನಡೆದಿದೆ.

ತಾಲೂಕಿನ ಬೋರೆ ಮೇಗಳ ಕೊಪ್ಪಲು ಗ್ರಾಮದ ನರಸಿಂಹೇಗೌಡರ ಮಗ ಧರ್ಮ ಎಂಬುವರ ಮನೆಯಲ್ಲಿ ಸೋಮವಾರ ಮಧ್ಯರಾತ್ರಿ ಕಳ್ಳತನ ನಡೆದಿದೆ.

ಮಧ್ಯರಾತ್ರಿ ವಾಹನದಲ್ಲಿ ಬಂದಿರುವ ಕಳ್ಳರು ಮನೆಯವರು ಹೊರಗೆ ಬಾರದಂತೆ  ಮುಂಭಾಗದ ಚಿಲಕಕ್ಕೆ ಕಡ್ಡಿ ಸಿಲುಕಿಸಿ ಕೊಟ್ಟಿಗೆ ಬೀಗ ಮೀಟಿ ಎರಡು ಸಣ್ಣ ಮರಿಗಳನ್ನು ಅಲ್ಲೇ ಬಿಟ್ಟು ಉಳಿದ 9 ಜಾನುವಾರುಗಳನ್ನು ಕಳವು ಮಾಡಿದ್ದಾರೆ.

ರಾತ್ರಿ 1.30ಕ್ಕೆ ಮನೆಯಿಂದ ಹೊರಬರಲು ಪ್ರಯತ್ನ ನಡೆಸಿದಾಗ ಹೊರಗಿನಿಂದ ಚಿಲಕ ಹಾಕಿರುವುದು ಮನೆಯ ಮಾಲೀಕರಿಗೆ ಗೊತ್ತಾಗಿದೆ.

ತಕ್ಷಣ ಅಕ್ಕ,ಪಕ್ಕದವರಿಗೆ ವಿಷಯ ತಿಳಿಸಿ ವಾಹನ ಹಿಡಿಯಲು ಯತ್ನಿಸಿದರೂ ಫಲವಾಗಿಲ್ಲ.