ಮೈಸೂರು: ಆಧುನಿಕ ಭಾರತದ ಆರ್ಥಿಕತೆಯ ಪಿತಾಮಹರಂತೆ ಕಾರ್ಯ ನಿರ್ವಹಿಸಿದ ಮನಮೋಹನ್ ಸಿಂಗ್ ಅವರು
ದೇಶದ ಆರ್ಥಿಕ ಸುಧಾರಣಾ ಯುಗದ ಮಹಾನ್ ಶಿಲ್ಪಿ ಎಂದು ಅರ್ಥಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕರಾದ ಕೆ.ಸಿ ಬಸವರಾಜ್ ತಿಳಿಸಿದರು.
ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿಗಳು ಹಾಗೂ ಆರ್ಥಿಕತಜ್ಞ ಡಾ. ಮನಮೋಹನ್ ಸಿಂಗ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿ ವಿ ನರಸಿಂಹರಾವ್ ಅವರ ಸಂಪುಟ ಸಭೆಯಲ್ಲಿ ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ಭಾರತ ದಿವಾಳಿಯತ್ತ ಸಾಗುತ್ತಿದ್ದಾಗ ಸಿಂಗ್ ಅವರು ತಮ್ಮ ಮೊದಲ ಬಜೆಟ್ ನಲ್ಲಿ ಆರ್ಥಿಕತೆಯ ಹೊಸ ನೀತಿಯಾದ ಉದಾರೀಕರಣ ಜಾಗತೀಕರಣ ಮತ್ತು ಖಾಸಗೀಕರಣ ವನ್ನು ಜಾರಿಗೆ ತಂದು ದೇಶದ ಸುಸ್ಥಿರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿ ಕೊಟ್ಟರು ಎಂದು ಹೇಳಿದರು.
ಎಲ್ ಪಿ ಜಿ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಗಳಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಟ್ಟು ವಿದೇಶಿ ಬಂಡವಾಳದತ್ತ ಗಮನಹರಿಸಿ ದೇಶದ ತೆರಿಗೆ ನೀತಿಯನ್ನು ಸಡಿಲಗೊಳಿಸಿ ದೇಶದ ಆರ್ಥಿಕತೆಯನ್ನು ಸುಧಾರಣೆಯತ್ತ ಕೊಂಡೊಯ್ದ ಹೆಗ್ಗಳಿಕೆ ಡಾ.ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
2004 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಕಟ್ಟಿತ್ತು. ಒಬ್ಬ ಆರ್ಥಿಕ ತಜ್ಞನನ್ನು ಈ ದೇಶದ ಪ್ರಧಾನಿ ಮಾಡಬೇಕೆಂದು ಸೋನಿಯಾ ಗಾಂಧಿಯವರು ತಮಗೆ ಪ್ರಧಾನಿಯಾಗುವ ಅವಕಾಶವಿದ್ದರೂ ಆ ಸ್ಥಾನವನ್ನು ಮನಮೋಹನ್ ಸಿಂಗ್ ಅವರಿಗೆ ವಹಿಸಿಕೊಟ್ಟು ದೇಶದ ಆರ್ಥಿಕತೆಯ ತಜ್ಞ ಪ್ರಧಾನಿಯಾಗಬೇಕೆಂಬ ಆಶಯವನ್ನು ಈಡೇರಿಸಿಕೊಂಡರು ಎಂದು ಹೇಳಿದರು.
ರಾಜಕೀಯ ಹಿನ್ನಲೆಯೇ ಇಲ್ಲದೆ ಪ್ರಧಾನಿಯಾಗಿ ಆಯ್ಕೆ ಆದರೂ ತಮ್ಮ ಹೊಸ ಹೊಸ ಆಡಳಿತ ನೀತಿಗಳಿಂದ ಸುಧಾರಣೆಗಳನ್ನು ತಂದು ಪ್ರಪಂಚದ ಮುಂದೆ ಭಾರತ ತಲೆ ಎತ್ತಿ ನಿಲ್ಲುವಂತೆ ಅಭಿವೃದ್ಧಿಪಡಿಸಿದರು.
ಮೈಸೂರು ವಿಶ್ವ ವಿದ್ಯಾಲಯಕ್ಕೆ100 ಕೋಟಿ ಕೊಟ್ಟು ಶ್ರೀಮಂತ ವಿಶ್ವ ವಿದ್ಯಾಲಯ ಮಾಡಲು ಮನಮೋಹನ್ ಸಿಂಗ್ ಸಹಾಯ ಮಾಡಿದರು ಎಂದು ಕೆ.ಸಿ. ಬಸವರಾಜ್ ಸ್ಮರಿಸಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ ಬಿ ಜೆ ವಿಜಯ್ ಕುಮಾರ್ ಮಾತನಾಡಿ, ದೇಶದಾದ್ಯಂತ ಅಗಲಿದ ಮಾಜಿ ಪ್ರಧಾನಿಗಳಿಗೆ ಗೌರವದ ನಮನವನ್ನು ಸಲ್ಲಿಸುತ್ತಿದೆ, ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ದೇಶ ಕಂಬನಿ ಮಿಡಿಯುತ್ತಿದೆ ಆದರೆ ಕೆಲವು ವಿಕೃತ ಮನಸ್ಸಿನ ರಾಜಕಾರಣಿಗಳು ಹನುಮನ ಹೆಸರಿನಲ್ಲಿ ಉತ್ಸಹ ಮಾಡಿಕೊಂಡು ಅಗಲಿದ ನಾಯಕನಿಗೆ ಅಗೌರವ ತೋರಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಾ. ಸಿಂಗ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಹಾಗೂ ಅವರ ಸಮಾಧಿ ಮಾಡಿದ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಶಾಸಕ ಹರೀಶ್ ಗೌಡ, ಮಾಜಿ ಶಾಸಕ ಎಚ್ ಪಿ ಮಂಜುನಾಥ್,ಕೋಟೆ ಶಿವಣ್ಣ, ಭಾರತೀ ಶಂಕರ್ , ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್ ಮೂರ್ತಿ, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಹೆಚ್.ಎ ವೆಂಕಟೇಶ್, ಮೈಸೂರು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ ಮಾಜಿ ಪ್ರಧಾನಿಗೆ ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಹಾಜರಿದ್ದರು.