ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ: 151 ಪ್ರಯಾಣಿಕರ ದುರ್ಮರಣ

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಘೋರ ದುರಂತ ಸಂಭವಿಸಿದ್ದು,181 ಪ್ರಯಾಣಿಕರಿದ್ದ ವಿಮಾನ ಪತನಗೊಂಡು 151 ಮಂದಿ ಮೃತಪಟ್ಟಿದ್ದಾರೆ.

ದಕ್ಷಿಣ ಕೊರಿಯಾದ ಮುವಾನ್‌ ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನ ಲ್ಯಾಂಡಿಂಗ್ ಮಾಡುವಾಗ ಬೆಂಕಿ ಕಾಣಿಸಿಕೊಂಡಿದೆ.

ವಿಮಾನವು ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿತ್ತು. ಬೋಯಿಂಗ್ 737-800 ವಿಮಾನದಲ್ಲಿದ್ದ ಪ್ರಯಾಣಿಕರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.

ಕಳೆದ ವಾರ ಕಜಾಕಿಸ್ತಾನದ ಅಕ್ಟೌ ಬಳಿ ಸಂಭವಿಸಿದ ಅಜೆರ್‌ಬೈಜಾನ್ ಏರ್‌ಲೈನ್ ವಿಮಾನ ಅಪಘಾತದ ಬೆನ್ನಲ್ಲೇ ಈಗ ಮತ್ತೊಂದು ವಿಮಾನ ಪತನವಾಗಿದೆ.

ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 175 ಪ್ರಯಾಣಿಕರು ಮತ್ತು 6 ಸಿಬ್ಬಂದಿ ವಿಮಾನದಲ್ಲಿದ್ದರು.

ರಕ್ಷಣಾ ಮತ್ತು ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸುತ್ತಿದೆ.ಮುವಾನ್ ವಿಮಾನ ನಿಲ್ದಾಣ ನೀಡಿರುವ ಮಾಹಿತಿಯಲ್ಲಿ ಬೆಂಕಿ ನಂದಿಸುವ ಕಾರ್ಯ ಪೂರ್ಣಗೊಂಡಿದೆ.ಈ ಅವಘಡದಲ್ಲಿ ಗಾಯಗೊಂಡಿರುವ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆಯೊಂದಿಗೆ ವಿಮಾನ ಲ್ಯಾಂಡಿಂಗ್ ವಿಫಲವಾಗಿ ವಿಮಾನ ನಿಲ್ದಾಣದ ತಡೆಗೋಡೆಗೆ ಅಪ್ಪಳಿಸಿದೆ. ಇದರಿಂದ ದೊಡ್ಡ ಸ್ಫೋಟ ಸಂಭವಿಸಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.