ಮಹಾರಾಜರ ಕಾಲದಲ್ಲೇ ಪ್ರಿನ್ಸೆಸ್ ರಸ್ತೆ ಹೆಸರಿದ್ದರೆ ಬದಲಾವಣೆ ಬೇಡ‌:ಪ್ರತಾಪ್

ಮೈಸೂರು: ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ನಾಮಕರಣ‌ ಮಾಡುವ ವಿಚಾರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಯೂ ಟರ್ನ್ ಹೊಡೆದಿದ್ದಾರೆ.

ದಾಖಲೆಗಳಲ್ಲಿ ಮಹಾರಾಜರ ಕಾಲದಲ್ಲೇ ಪ್ರಿನ್ಸೆಸ್ ರಸ್ತೆ ಎಂದು ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ‌ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಹ, ಕೆಆರ್‌ಎಸ್ ರಸ್ತೆಗೆ ಪ್ರಿನ್ಸೆಸ್ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಎನ್ನುವುದಾದರೇ ಬದಲಾವಣೆ ಮಾಡುವುದು ಬೇಡ. ಈ ವಿಚಾರಕ್ಕೆ ನನ್ನ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.

ಹೆಸರು ಬದಲಾವಣೆ ಮಾಡುವುದು ಬೇಡ‌ ಎಂದು ಸ್ಥಳೀಯ ಶಾಸಕ ಹರೀಶ್ ಗೌಡ ಅವರಿಗೆ ನಾನೇ ಮನವಿ ಮಾಡುತ್ತೇನೆ ಎಂದು ಕೂಡಾ ಹೇಳಿದರು.

ಕೆಆರ್‌ಎಸ್ ರಸ್ತೆಗೆ ಅಧಿಕೃತ ಹೆಸರಿಲ್ಲ, ಖಾಲಿ‌ ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಹೆಸರನ್ನು ಇಡಬಹುದು ಎಂದು ಹೇಳಿದ್ದೆ. ದಯವಿಟ್ಟು ನೋಟಿಫಿಕೇಷನ್ ವಾಪಸ್ ತೆಗೆದುಕೊಳ್ಳಿ. ತಕರಾರು ಸಲ್ಲಿಸುವವರು ದಾಖಲೆಯನ್ನ ಒದಗಿಸಿ. ವಿವಾದವನ್ನು ಇಲ್ಲಿಗೆ ಮುಗಿಸೋಣ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು

ಮೈಸೂರಿಗೆ ಮಹಾರಾಜರ ಕೊಡುಗೆ ಬಹಳ ಇದೆ, ಜನಪ್ರತಿನಿಧಿಗಳ ಕೊಡುಗೆ ಕೂಡ ಇದೆ. ಇಟ್ಟಿರುವ ಹೆಸರನ್ನು ಬದಲಾಯಿಸುವ ದಾಷ್ಟ್ಯ ನಮಗೆ ಬೇಡ‌ ಹೇಳಿದರು.

ಹೊಸ ಬಡಾವಣೆ ಮಾಡಿ ಅಲ್ಲಿಗೆ ಸಿದ್ದರಾಮಯ್ಯ ಅವರ ಹೆಸರಿಟ್ಟರೇ ಅರ್ಥ ಪೂರ್ಣ ಆಗುತ್ತದೆ ಎಂದು ಕೂಡಾ ಸಿಂಹ ಸಲಹೆ ನೀಡಿದರು.