ಮೈಸೂರು: ಬಿಎಡ್ ಓದುತ್ತಿದ್ದ ಯುವತಿ ಪಾಠ ಹೇಳಿಕೊಟ್ಟ ಗುರುವಿನ ಜೊತೆಗೆ ಓಡಿ ಹೋಗಿ ಮದುವೆ ಆದ ಘಟನೆ ಜಿಲ್ಲೆಯ ಹುಣಸೂರಿನಲ್ಲಿ ನಡೆದಿದ್ದು ಮನೆಯವರಿಗೆ ಆಘಾತ ವಾಗಿದೆ.
ಮನೆಯವರ ವಿರೋಧ ಲೆಕ್ಕಿಸದೆ ತನಗಿಂತ 15 ವರ್ಷ ಹಿರಿಯ ಉಪನ್ಯಾಸಕನನ್ನು ಮದುವೆ ಆಗಿದ್ದಲ್ಲದೆ ರಕ್ಷಣೆ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಮಗಳ ಈ ನಡೆಯಿಂದ ಪೋಷಕರು ಶಾಕ್ ಗೆ ಒಳಗಾಗಿದ್ದಾರೆ ಅಲ್ಲದೆ ತಂದೆ ಹಾಸಿಗೆ ಹಿಡಿದಿದ್ದಾರೆ.
ಹುಣಸೂರಿನ ನಿವಾಸಿ ಪೂರ್ಣಿಮ(24) ಎಂಎ ಮುಗಿಸಿ ಬಿಎಡ್ ಓದಲು ಹುಣಸೂರಿನ ಮಹಾವೀರ್ ಕಾಲೇಜ್ ಆಫ್ ಎಜುಕೇಷನ್ ಗೆ ಸೇರಿದ್ದಾಳೆ.
ಪಾಠ ಕಲಿಯುವ ಜೊತೆಗೆ ಲೆಕ್ಚರರ್ ಯಶೋದಕುಮಾರ್(39) ಜೊತೆ ಪ್ರೀತಿಗೆ ಬಿದ್ದಿದ್ದಾಳೆ.ಈ ವಿಚಾರ ಮನೆಯವರ ಗಮನಕ್ಕೆ ಬಂದಿದೆ.ಇಬ್ಬರು ಪ್ರೇಮಿಗಳು ಮದುವೆ ಆಗಲು ತೀರ್ಮಾನಿಸಿದ್ದಾರೆ.
ಪೂರ್ಣಿಮ ಮನೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿದೆ ಜತೆಗೆ ಕಾಲೇಜಿಗೆ ಹೋಗದಂತೆ ತಡೆ ಒಡ್ಡಿದ್ದಾರೆ. ಆದರೆ ಮೊಬೈಲ್ ನಲ್ಲೇ ಇವರ ಪ್ರೀತಿ,ಪ್ರೇಮ ಮುಂದುವರೆದಿದೆ.
ಡಿ.26ರಂದು ಸರ್ಟಿಫಿಕೇಟ್ ತರುವುದಾಗಿ ತಿಳಿಸಿ ಮನೆ ಬಿಟ್ಟ ಪೂರ್ಣಿಮ ವಾಪಸು ಬಂದಿಲ್ಲ.
ನಂತರ ಮೊಬೈಲ್ ನಲ್ಲಿ ಮದುವೆ ಆಗಿರುವುದಾಗಿ ಮೆಸೇಜ್ ಹಾಕಿದ್ದಾಳೆ.
ತಮ್ಮಿಬ್ಬರಿಗೂ ತೊಂದರೆ ನೀಡಬಾರದೆಂಬ ಉದ್ದೇಶದಿಂದ ರಕ್ಷಣೆಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾಳೆ.
ಬೀದಿಬದಿ ಸೊಪ್ಪುಮಾರಿ 2 ಲಕ್ಷ ಸಾಲ ಮಾಡಿ ಮಗಳನ್ನು ಕಾಲೇಜಿಗೆ ಸೇರಿಸಿ ತಮಗೆ ಆಸರೆ ಆಗುತ್ತಾಳೆ ಎಂಬ ಕನಸು ಕಟ್ಟಿದ್ದ ಮನೆಯವರಿಗೆ ಮಗಳು ಮಾಡಿದ ಕೆಲಸದಿಂದ ನೊಂದು ಹೋಗಿದ್ದಾರೆ.
ತಾಯಿ ಮಹದೇವಮ್ಮ ಹಿಡಿ ಶಾಪ ಹಾಕುತ್ತಿದ್ದರೆ,ತಂದೆ ಸಜ್ಜೇಗೌಡ ನೊಂದು ಮೂಲೆ ಸೇರಿದ್ದಾರೆ.