ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಲಡ್ಡು‌ ವಿತರಣೆ

ಮೈಸೂರು: ನೂತನ ವರ್ಷವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು.

2025ನೇ ವರ್ಷದ ಮೊದಲ ದಿನವನ್ನ ಯೋಗನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾದ ಪೂಜಾ ಕೈಂಕರ್ಯಗಳು ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.

ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲಾಯಿತು.

ಭಾಷ್ಯಂ ಸ್ವಾಮೀಜಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ನೇತೃತ್ವದಲ್ಲಿ ಭಕ್ತರಿಗೆ ಲಾಡು ಹಾಗೂ ಪುಳಿಯೊಗರೆ ಪ್ರಸಾದ ವಿತರಿಸಲಾಯಿತು.

ಮುಂಜಾನೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಯೋಗನರಸಿಂಹ ಸ್ವಾಮಿಯ ದರುಶನ ಪಡೆದರು.

2 ಕೆಜಿ ತೂಕದ 10 ಸಾವಿರ ಲಡ್ಡು ಹಾಗೂ 150 ಗ್ರಾಂ ತೂಕದ 2 ಲಕ್ಷ ಲಡ್ಡುಗಳನ್ನು ಭಕ್ತರಿಗೆ ವಿತರಿಸಲಾಯಿತು.

1994ರಿಂದ ಆರಂಭವಾದ ಲಡ್ಡು ವಿತರಣಾ ಕಾರ್ಯ ನಿರಂತರವಾಗಿ ಪ್ರತಿ ವರ್ಷ ಮುಂದುವರೆಯುತ್ತಿದೆ.

ರಾತ್ರಿ 11 ಗಂಟೆ ವರೆಗೆ ಲಡ್ಡು ವಿತರಿಸಲಾಗುತ್ತದೆ ಎಂದು ಇದೇ ವೇಳೆ ಭಾಷ್ಯಂ ಸ್ವಾಮೀಜಿ ತಿಳಿಸಿದರು.