ಬಸ್ ದರ ಶೇ.15 ರಷ್ಟು ಏರಿಕೆ

ಬೆಂಗಳೂರು, ಜ.2: ಬಸ್ ದರ ಏರಿಕೆ ಫಿಕ್ಸ್ ಆಗಿದ್ದು ಜ.5 ರಿಂದಲೇ ಪ್ರಯಾಣಿಕರ ಮೇಲೆ ಶೇ.15 ರಷ್ಟು ಹೊರೆ ಬೀಳೋದು ಗ್ಯಾರಂಟಿ.

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮಗಳ ಪ್ರಯಾಣದರ ಶೇ 15ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ದರವು ಜನವರಿ 5 ರಿಂದ ಜಾರಿಗೆ ಬರಲಿದೆ.

ಸಚಿವ ಸಂಪುಟದ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಎಂಟಿಸಿ ಗೆ ಹತ್ತು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿತ್ತು. ಅಂದು ಡೀಸೆಲ್ ದರ ಲೀಟರ್ ಗೆ 60ರೂ 98 ಪೈಸೆ ಇತ್ತು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಂದಿನ ಡೀಸೆಲ್ ವೆಚ್ಚ 9 ಕೋಟಿ 16ಲಕ್ಷ ಇದ್ದು ಪ್ರಸ್ತುತ 13.21ಕೋಟಿ ಹೆಚ್ಚಳ ಆಗಿದೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಸಿಬ್ಬಂದಿ ವೆಚ್ಚ 12.85ಕೋಟಿ ಇದ್ದದ್ದು ಪ್ರಸ್ತುತ 18.36 ಕೋಟಿ ಆಗಿದೆ ಪ್ರತಿ ದಿನ 9.56ಕೋಟಿ ಹೆಚ್ಚುವರಿ ಹೊರೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಆಗಿದೆ ಎಂದು ಸಚಿವರು ತಿಳಿಸಿದರು.

ಎಲ್ಲಾ ಕಾರ್ಪೋರೇಷನ್ ಗಳು, ನಗರ ಬಸ್ಸುಗಳು, ಐಷಾರಾಮಿ ಬಸ್ಸುಗಳು ಸೇರಿದಂತೆ ಎಲ್ಲರಿಗೂ ಶೇ 15ರಷ್ಟು‌ ದರ ಪರಿಷ್ಕರಿಸಲಾಗಿದೆ. ಇದರಿಂದ ಪ್ರತಿ ತಿಂಗಳು 74.85 ಕೋಟಿಯಷ್ಟು ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ 5015 ಕೋಟಿಗಳನ್ನು ಮೀಸಲಿರಿಸಿದೆ. ಪ್ರತಿ ತಿಂಗಳು ನಾಲ್ಕೂ ನಿಗಮಗಳಿಗೆ 417.92 ಕೋಟಿ ಗಳ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ. ಕರ್ನಾಟಕ ಅತ್ಯುತ್ತಮ ಆರ್ಥಿಕ ಹೊಣೆಗಾರಿಕೆಯನ್ನು ಅನುಷ್ಠಾನ ಮಾಡಿರುವ ರಾಜ್ಯ ಎಂದು ಹೆಚ್.ಕೆ.ಪಾಟೀಲ್ ಹೇಳಿದರು.