ಮೈಸೂರು: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ಕಾಮಗಾರಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಈ ಜಮೀನಿನಲ್ಲಿ ಫಲಕ ಅಳವಡಿಸುವ ಮೂಲಕ ತನ್ನ ವಶಕ್ಕೆ ಪಡೆದಿದೆ.ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರ ಆದೇಶದಂತೆ ತಹಸೀಲ್ದಾರ್ ಕೆ.ಎಂ. ಮಹೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯನ್ನ ವಶಕ್ಕೆ ಪಡೆದಿದ್ದಾರೆ.
ಮೈಸೂರು ತಾಲೂಕು ಕಸಬಾ ಹೋಬಳಿ ಹೆಬ್ಬಾಳು ಗ್ರಾಮದ ಸರ್ವೆ ನಂ.221 ರ 1.25 ಎಕರೆ ಜಮೀನು ಸರ್ಕಾರಕ್ಕೆ ಸೇರಿದ ಆಸ್ತಿ,ಈ ಆಸ್ತಿಯಲ್ಲಿ ಭೂಗಳ್ಳರು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದ ಮಾಹಿತಿ ಅರಿತ ತಹಸೀಲ್ದಾರ್ ಮಹೇಶ್ ಕುಮಾರ್ ಅವರು ದಾಖಲೆಗಳನ್ನ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.
ವಿಜಯನಗರ ಠಾಣೆಗೆ ಪತ್ರ ಬರೆದು ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರು.ಅದರಂತೆ ನಿರ್ಮಾಣ ಕಾರ್ಯಕ್ಕೆ ಬ್ರೇಕ್ ಹಾಕಲಾಗಿತ್ತು.ಇಂದು ಆ ಜಾಗದಲ್ಲಿ ಫಲಕ ಅಳವಡಿಸಿ ತಮ್ಮ ವಶಕ್ಕೆ ಪಡೆದರು.
ವಿಶೇಷ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ULA 1135/76-77 ದಿನಾಂಕ 5-7-85 ರಂತೆ ಸದರಿ ಜಮೀನನ್ನ ಹೆಚ್ಚುವರಿ ನಗರಾಸ್ತಿ ಎಂದು ಘೋಷಿಸಿ RTC ಯಲ್ಲಿ ‘ಸರ್ಕಾರ’ ಎಂದು ಘೋಷಿಸಿ ನಮೂದಾಗಿದೆ.
ದಾಖಲೆಗಳ ಪ್ರಕಾರ ಸರ್ಕಾರಕ್ಕೆ ಸೇರಿದ ಆಸ್ತಿಯಲ್ಲಿ ಭೂಗಳ್ಳರು ಅಕ್ರಮವಾಗಿ ಕಟ್ಟಡ ನಿರ್ಮಿಸಿ ಮಾರಾಟ ಮಾಡಲು ಯತ್ನಿಸಿದ್ದಾರೆಂದು ಆರೋಪಿಸಿ ತಹಸೀಲ್ದಾರ್ ಕೆ.ಎಂ ಮಹೇಶ್ ಕುಮಾರ್ ಅವರು ಪೊಲೀಸರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದೀಗ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿದ ಮಹೇಶ್ ಕುಮಾರ್ ಈ ಜಾಗದಲ್ಲಿ ಫಲಕ ಅಳವಡಿಸಿ ಜಿಲ್ಲಾಡಳಿತದ ವಶಕ್ಕೆ ಪಡೆದಿದ್ದಾರೆ.ಶೀಘ್ರದಲ್ಲೇ ಅಕ್ರಮ ಕಟ್ಟಡವನ್ನೂ ಸಹ ತೆರುವು ಗೊಳಿಸುವುದಾಗಿಯೂ ಅವರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ ಐ ಹೇಮಂತ್ ಕುಮಾರ್,ಗ್ರಾಮ ಆಡಳಿತಾಧಿಕಾರಿಗಳಾದ ಮಹೇಶ್ .ಡಿ ಹಾಗೂ ಅಜೀಮ್ ಖಾನ್ ಭಾಗವಹಿಸಿದ್ದರು.