ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಹೆಚ್ ಎಂ ಪಿ ವಿ ವೈರಸ್ ಪತ್ತೆ

ಬೆಂಗಳೂರು: ಚೀನಾದಲ್ಲಿ ಕಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಭಾರತಕ್ಕೆ ಅದರಲ್ಲೂ  ಬೆಂಗಳೂರಿಗೆ ಕಾಲಿಟ್ಟಿದ್ದು ಆತಂಕ ಕಾಡುತ್ತಿದೆ.

ಬೆಂಗಳೂರಿನಲ್ಲಿ ಟ್ರಾವೆಲ್‌ ಹಿಸ್ಟರಿ ಇಲ್ಲದ ಎರಡು ಪ್ರಕರಣಗಳು ಪತ್ತೆಯಾಗಿದೆ

ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿದ್ದು ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ದೃಢಪಡಿಸಿದೆ.

ಈ ವೈರಸ್ ಇದ್ದ 3 ತಿಂಗಳ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರೆ 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಐಸಿಎಂಆರ್‌, ದೇಶದಾದ್ಯಂತ ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡಲು  ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಎರಡು ಪ್ರಕರಣಗಳನ್ನು ಗುರುತಿಸಲಾಗಿದೆ. HMPV ಭಾರತ ಸೇರಿದಂತೆ ವಿಶ್ವಾದ್ಯಂತ ಹರಡಿದ್ದು,ಹಲವು ದೇಶಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ.

ಇದು ಒಂದು ಉಸಿರಾಟದ ವೈರಸ್ ಆಗಿದ್ದು ಅದು ಸಾಮಾನ್ಯವಾಗಿ ಶೀತವನ್ನು ಹೋಲುವ ಸೌಮ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ವಿಶೇಷವಾಗಿ ಮಕ್ಕಳು, ಹಿರಿಯರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಬೇಗ ಹರಡುವ ಸಧ್ಯತೆ ಇದರ ಎಂದು ಹೇಳಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ಪರೀಕ್ಷೆಗೆ ಮಕ್ಕಳ ಸ್ವಾಬ್‌ ಅನ್ನು ಪುಣೆ ಲ್ಯಾಬ್‌ಗೆ ಕಳುಹಿಸುವ ಬಗ್ಗೆ ಚರ್ಚಿಸುತ್ತೇವೆ‌ ಎಂದು ಹೇಳಿದರು.

ಐಸಿಎಂಆರ್, ಕೇಂದ್ರ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲಾ ಕಡೆ ಟೆಸ್ಟ್ ಮಾಡಿದರೂ ಮಕ್ಕಳು, ವಯಸ್ಸಾದವರಲ್ಲೂ ಸಿಗಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ, ಈ ಸಂಬಂಧ ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದ್ದೇವೆ ಎಂದು ತಿಳಿಸಿದರು.