ಸಿಎಂ ಡಿನ್ನರ್‌ ಸಭೆ ಪರ ಡಿಕೆಶಿ ಬ್ಯಾಟಿಂಗ್

ನವದೆಹಲಿ: ಔತಣ ಕೂಟಕ್ಕೆ ಸೇರಿದರೆ ರಾಜಕೀಯ ಯಾಕೆ ಬೇರೆಸುತ್ತೀರಿ ಎಲ್ಲರೂ ಊಟಕ್ಕೆ ಸೇರಿದರೆ ಅದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಡಿನ್ನರ್‌ ಸಭೆ ಪರ ಬ್ಯಾಟಿಂಗ್ ಬೀಸಿದ್ದಾರೆ.

ವಿದೇಶ ಪ್ರವಾಸ ಮುಗಿಸಿ ದೆಹಲಿಗೆ ಬಂದ ವೇಳೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಡಿನ್ನರ್‌ ಸಭೆ‌ ನಡೆಸಿದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಭೆ ಪರವೇ ಮಾತನಾಡಿದರು.

ನಮ್ಮ ಮನೆಗೆ ನೀವು ಬರೋದು, ನಿಮ್ಮ ಮನೆಗೆ ನಾವು ಬರೋದು ಸಹಜ. ಔತಣ ಕೂಟಕ್ಕೆ ಸೇರಿದರೆ ರಾಜಕೀಯ ಯಾಕೆ ಬೇರೆಸುತ್ತೀರಿ. ನಾನು ಕೆಲವು ಬಾರಿ ಊಟಕ್ಕೆ ಕರೆಯುತ್ತೇನೆ ತಪ್ಪೇನು‌ ಎಂದು ತಿಳಿಸಿದರು.

ನಾಲ್ಕು ವರ್ಷದಿಂದ ಎಲ್ಲೂ ಹೊರಗೆ ಹೋಗಿರಲಿಲ್ಲ. ಹೀಗಾಗಿ ಕುಟುಂಬದ ಜೊತೆಗೆ ಹೊಸ ವರ್ಷಕ್ಕೆ ವಿದೇಶಕ್ಕೆ ತೆರಳಿದ್ದೆ. ಕೆಲವರು ಕುಟುಂಬ ಜೊತೆಗೆ ಬೇರೆ ಕಡೆಗೆ ಹೋಗಿದ್ದಾರೆ ಎಂದು ಹೇಳಿದರು.

ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಜ.2ರ ರಾತ್ರಿ ನಡೆದ ಔತಣ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಲವು ಸಚಿವರು ಮತ್ತು ಶಾಸಕರು ಪಾಲ್ಗೊಂಡಿದ್ದರು. ಸಂಪುಟ ಸಭೆಯ ಬಳಿಕ ಸಚಿವರ ಅಧಿಕೃತ ನಿವಾಸದಲ್ಲಿ ಔತಣಕೂಟ ಆಯೋಜಿಸಲಾಗಿತ್ತು.

ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ನಡುವೆಯೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಸಭೆ ನಡೆದಿರುವುದು ಕುತೂಹಲ ಮೂಡಿಸಿತ್ತು.
ಡಾ.ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ.ಎಚ್.ಸಿ. ಮಹದೇವಪ್ಪ ಸೇರಿ ಏಳು ಮಂದಿ ಸಚಿವರು ಹಾಜರಿದ್ದರು. ಜತೆಗೆ ಒಟ್ಟು 35 ಮಂದಿ ಶಾಸಕರೂ ಭಾಗವಹಿಸಿದ್ದರು.