ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಕ್ಕಾ 60 ಪರ್ಸೆಂಟ್ ಕಮಿಶನ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ಆಡಳಿತದಿಂದಾಗಿ ರಾಜ್ಯ ದಿವಾಳಿಯ ಕಡೆಗೆ ಸಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ ಹಾಗೂ ಕೇರಳದಂತೆಯೇ ಕರ್ನಾಟಕ ಕೂಡ ದಿವಾಳಿಯ ಕಡೆಗೆ ಹೆಜ್ಜೆ ಇಡುತ್ತಿದೆ. ಕಾಂಗ್ರೆಸ್‌ನದ್ದು ಪಕ್ಕಾ 60 ಪರ್ಸೆಂಟ್ ಕಮಿಶನ್‌ನ ಸರ್ಕಾರ,ಇವರ ಬಳಿ ಗುತ್ತಿಗೆದಾರರಿಗೆ ಪಾವತಿಸಲು ಬಳಿ ಹಣವಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರಕ್ಕೆ 40 ಪರ್ಸೆಂಟ್ ಎಂದು ಆರೋಪಿಸಿದ ಗುತ್ತಿಗೆದಾರರೇ ಈಗ ಕಾಂಗ್ರೆಸ್ ಸರ್ಕಾರ 60% ಕಮಿಶನ್ ಸರ್ಕಾರ ಎಂದು ಹೇಳಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನೋಡುತ್ತಿದ್ದಾರೆ. ಬೆಂಗಳೂರಿನಲ್ಲಿ 30-40 ನಿವೇಶನಕ್ಕೆ 10 ಲಕ್ಷ ರೂ. 40-60 ನಿವೇಶನಕ್ಕೆ 20 ಲಕ್ಷ ರೂ., ಇದಕ್ಕೂ ಹೆಚ್ಚಿನ ನಿವೇಶನಗಳಿಗೆ 40 ಲಕ್ಷ ರೂ. ಲಂಚ ಕಮಿಶನ್ ಕೊಡಬೇಕಿದೆ ಎಂದು ಆರೋಪಿಸಿದರು.
ಗುತ್ತಿಗೆದಾರರಿಗೆ ಸರ್ಕಾರ 32 ಸಾವಿರ ಕೋಟಿ ರೂ. ನೀಡಬೇಕಿದೆ. ಈ ಹಣ ಹೊಂದಿಸಲು ಎಲ್ಲದಕ್ಕೂ ಸರ್ಕಾರ ತೆರಿಗೆ ಹಾಕುತ್ತಿದೆ. ಇಲ್ಲವಾದರೆ ಗುತ್ತಿಗೆದಾರರಿಗೆ ಕೆಲಸ ಸ್ಥಗಿತಗೊಳಿಸುತ್ತಾರೆ ಇದರ ನಡುವೆ ಆಶಾ ಕಾರ್ಯಕರ್ತೆಯರು ಧರಣಿ ಆರಂಭಿಸಿದ್ದಾರೆ. ಜೊತೆಗೆ ತೊಗರಿ ಖರೀದಿಗೆ ಸರ್ಕಾರದ ಬಳಿ ಹಣವಿಲ್ಲ ಎಂದು ವ್ಯಂಗ್ಯ ವಾಡಿದರು.
ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಬಹಳ ಮೋಸ ಮಾಡುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23 ರಲ್ಲಿ ಬಿಜೆಪಿ ಸರ್ಕಾರ 60 ಕೋಟಿ ರೂ. ಅನುದಾನ ನೀಡಿತ್ತು. 2024-25 ರಲ್ಲಿ ಕಾಂಗ್ರೆಸ್ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್ 45 ಕೋಟಿ ರೂ. ನೀಡಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವೆಚ್ಚವನ್ನು ಅಂಕಿ ಅಂಶಗಳ ಸಹಿತ ಅಶೋಕ್ ತಿಳಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರನ್ನು ಇನ್ನೂ ಬಂಧಿಸಿಲ್ಲ. ಬಹುಶಃ ಸುರಕ್ಷತೆ ದೃಷ್ಟಿಯಿಂದ ಅವರನ್ನು ಪೊಲೀಸರು ಕಬ್ಬಿನ್ ಗದ್ದೆಯಲ್ಲಿ ಇರಿಸಿರಬಹುದು. ಅವರ ಆಪ್ತರು ರೌಡಿಶೀಟರ್ ಪಟ್ಟಿಯಲ್ಲಿದ್ದು, ಆ ಪಟ್ಟಿಯಿಂದ ಹೆಸರು ತೆಗೆಸಿದ್ದೇ ಕಾಂಗ್ರೆಸ್ ನಾಯಕರು ಎಂದು ಇದೇ ವೇಳೆ ಅಶೋಕ್ ದೂರಿದರು.
ಸಚಿವ ರಾಮಲಿಂಗಾರೆಡ್ಡಿ ಹಳೆಯ ಸುದ್ದಿ ಹೇಳಿದ್ದಾರೆ. ನಾನು ಸಚಿವನಾಗಿದ್ದಾಗ ಸಾರಿಗೆ ನಿಗಮಗಳನ್ನು ನಷ್ಟಕ್ಕೆ ದೂಡಲಿಲ್ಲ. ಎಲ್ಲ ಕಡೆ ಬಸ್ ನಿಲ್ದಾಣ ನಿರ್ಮಿಸಿ ಬಾಡಿಗೆ ಮೂಲಕ ಆದಾಯ ಬರುವಂತೆ ಮಾಡಲಾಗಿತ್ತು. ಈಗ ಸರ್ಕಾರ ಎಲ್ಲೂ ನಿಲ್ದಾಣ ನಿರ್ಮಿಸಿಲ್ಲ. ನಾನು ಸಚಿವ ಸ್ಥಾನದಿಂದ ಹೊರಬಂದಾಗ ಬಿಎಂಟಿಸಿ ಲಾಭದಲ್ಲಿತ್ತು. ಕೋವಿಡ್ ಸಮಯದಲ್ಲಿ ಆರ್ಥಿಕ ನಷ್ಟವಾಗಿದ್ದಾಗಲೂ ಟಿಕೆಟ್ ದರ ಏರಿಸಲಿಲ್ಲ. ಗ್ಯಾರಂಟಿಗಳಿಂದಾಗಿ ಈಗ ಟಿಕೆಟ್ ದರ ಏರಿಸಿದ್ದಾರೆ ಎಂದು ಟೀಕಿಸಿದರು.
ಹೊಸ ವೈರಸ್ ಹರಡುತ್ತಿರುವುದರಿಂದ ಸರ್ಕಾರ ಟಾಸ್ಕ್ ಫೋರ್ಸ್ ರಚಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಆಕ್ಸಿಜನ್ ವ್ಯವಸ್ಥೆ ಮಾಡಬೇಕು. ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಅಧಿಕಾರಿಗಳು ಆಡಿಟ್ ಮಾಡಬೇಕು. ಸರ್ಕಾರ ಕೂಡಲೇ ಸಿದ್ಧತೆ ಮಾಡಿಕೊಳ್ಳಲಿ ಎಂದು ಪ್ರತಿಪಕ್ಷದ ನಾಯಕರು ಸಲಹೆ ನೀಡಿದರು.