ಬೆಂಗಳೂರು: ಸರ್ಕಾರ ಕೊಟ್ಟ ಹಣವನ್ನು ಖರ್ಚು ಮಾಡದೆ ವರ್ಷದ ಕೊನೆ ತಿಂಗಳಲ್ಲಿ ಖರ್ಚು ಮಾಡುವ ಅಧಿಕಾರಿಗಳಿಗೆ ಸಿದ್ದರಾಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು.
ಗೃಹ ಕಚೇರಿ ಕೃಷ್ಣದಲ್ಲಿ ಎರಡೂವರೆ ಗಂಟೆ ಕಾಲ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ,
ವರ್ಷದ ಕೊನೆ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ ಎಂದು ಕಿಡಿಕಾರಿದರು.
ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಹಂಚಲು ಕೊಟ್ಟ ಹಣವನ್ನು ಖರ್ಚು ಮಾಡದೆ ಇಟ್ಟುಕೊಂಡು ಕೂರುವುದಕ್ಕಾ ನೀವು ಇರುವುದು ಎಂದು ತರಾಟೆ ತೆಗೆದುಕೊಂಡ ಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.
2024-25 ನೇ ಸಾಲಿನಲ್ಲಿ ಆಯವ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 5,377 ಕೋಟಿ ಅನುದಾನ ಒದಗಿಸಲಾಗಿದೆ. ಇದುವರೆಗೆ 3,631 ಕೋಟಿ ಬಿಡುಗಡೆಯಾಗಿದೆ ಈ ಹಣ ಏಕೆ ಪೂರ್ತಿ ಖರ್ಚು ಮಾಡಲಿಲ್ಲ ಪ್ರಶ್ನಿಸಿದರು.
ಜೊತೆಗೆ ಅಂಬೇಡ್ಕರ್ ನಿಗಮದಲ್ಲಿ 900 ಕೋಟಿ, ಭೋವಿ ನಿಗಮದಲ್ಲಿ 107 ಕೋಟಿ ಸೇರಿ ಎಲ್ಲಾ ನಿಗಮಗಳಲ್ಲಿ ನೂರಾರು ಕೋಟಿ ಹಣ ಇದ್ದರೂ ಖರ್ಚು ಮಾಡದ ನಿಗಮದ ಎಂಡಿ ಗಳಿಗೆ ನೋಟಿಸ್ ನೀಡಿ, ಅಗತ್ಯ ಬಿದ್ದರೆ ಸಸ್ಪೆಂಡ್ ಮಾಡುವಂತೆ ಸಿಎಂ ಸೂಚಿಸಿದರು.
ಇಲಾಖೆಗೆ ಸರ್ಕಾರದಿಂದ ಕೊಟ್ಟ ಹಣದಲ್ಲಿ 2,892 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಉಳಿದದ್ದು ಹಾಗೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮಾರ್ಚ್ ಅಂತ್ಯದ ವರೆಗೆ ಕಾಯದೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಮಂತ್ರಿಗಳು ಆದೇಶಿಸಿದರು.