ಕೋವಿಡ್ ಮಾದರಿ ಸಂಗ್ರಹಕ್ಕೆ ಇನ್ನೂ 25 ತಂಡ ವ್ಯವಸ್ಥೆಗೆ ನೂತನ ಜಿಲ್ಲಾಧಿಕಾರಿ ಸೂಚನೆ

ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡ ರೋಹಿಣಿ ಸಿಂಧೂರಿ ಅವರು ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಹಾಗೂ ದಸರಾ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು.
ಕೋವಿಡ್ ಪರೀಕ್ಷೆಗೆ ಈ ಜಿಲ್ಲೆಯಲ್ಲಿ 70 ಸ್ಥಾಯಿ ತಂಡಗಳು ಹಾಗೂ 30 ಸಂಚಾರಿ ತಂಡಗಳು ಕೆಲಸ ಮಾಡುತ್ತಿವೆ. ಇನ್ನೂ ಹೆಚ್ಚಿನ ತಂಡಗಳ ನಿಯೋಜನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಅನುಮತಿ ಕೋರಿದರು. ಈ ಹಿನ್ನೆಲೆಯಲ್ಲಿ ಈಗಿರುವ 30 ಸಂಚಾರಿ ತಂಡಗಳ ಜೊತೆಗೆ ಇನ್ನೂ 25 ತಂಡಗಳಿಗೆ ಬೇಕಾದ ಲ್ಯಾಬ್ ಟೆಕ್ನಿಷಿಯನ್ಸ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಗಳನ್ನು ನಿಯೋಜಿಸಿಕೊಳ್ಳಲು ನೂತನ ಜಿಲ್ಲಾಧಿಕಾರಿಗಳು ಅನುಮತಿ ನೀಡಿದರು.
ಮಾದರಿ ಸಂಗ್ರಹಕ್ಕೆ ಬೇಕಾದ ವಿಟಿಎಂ ಉಪಕರಣಗಳು ಆರೋಗ್ಯ ಇಲಾಖೆಯಿಂದ ಬರುವುದು ತಡವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಅನುದಾನದಲ್ಲೇ 20 ಸಾವಿರ ವಿಟಿಎಂ ಉಪಕರಣಗಳನ್ನು ಖರೀದಿಸಿ ಆರೋಗ್ಯ ಇಲಾಖೆಗೆ ನೀಡುವಂತೆ ತಿಳಿಸಿದರು.
ಕೋವಿಡ್‍ನಿಂದಾಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ವಹಿಸುವಂತೆ ತಿಳಿದರು.
ಕೋವಿಡ್ ನಿಯಂತ್ರಣಕ್ಕಾಗಿ ನಿಯೋಜಿಸಿರುವ ಎಲ್ಲಾ ನೋಡಲ್ ಅಧಿಕಾರಿಗಳ ಸಭೆಯನ್ನೂ ಆದಷ್ಟು ಬೇಗ ಕರೆಯುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ, ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೆಂಕಟೇಶ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಶಿವಪ್ರಸಾದ್, ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವಿ ಮತ್ತಿತರರು ಉಪಸ್ಥಿತರಿದ್ದರು.