ಮೈಸೂರು: ಮಹಿಳಾ ಶಕ್ತಿಯನ್ನು ಸಬಲೀಕರಣ ಗೊಳಿಸಿ ಆರ್ಥಿಕವಾಗಿ ಅಭಿವೃದ್ಧಿ ಯಾಗಬೇಕು ಎಂಬುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಕೆ. ಎಂ. ಗಾಯತ್ರಿ ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವತಿಯಿಂದ ಜಿಲ್ಲಾ ಪಂಚಾಯತ್ ಡಿ. ದೇವರಾಜು ಅರಸು ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ವ್ಯವಹಾರಗಳಿಗೆ ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ಸಂಪರ್ಕ ಮತ್ತು ಉದ್ಯಮ ಹಣಕಾಸು ವಿಷಯ ಕುರಿತಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ ಅದರ ಸದುಪಯೋಗವನ್ನು ಪ್ರತಿಯೊಬ್ಬ ಮಹಿಳೆಯರು ಪಡೆದುಕೊಂಡು ತಮ್ಮ ಸ್ವಂತ ಶಕ್ತಿಯಿಂದ ಆರ್ಥಿಕವಾಗಿ ಸಬಲೀಕರಣ ಆಗುತ್ತಾ ಹೋಗಬಹುದು ಎಂಬುದಕ್ಕೆ ಈ ಯೋಜನೆಗಳು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಬ್ಯಾಂಕ್ ವ್ಯವಹಾರವನ್ನು ಹೇಗೆ ಮಾಡಬೇಕು, ಉದ್ಯಮ ಹಣಕಾಸಿನ ವ್ಯವಹಾರ ಯಾವ ರೀತಿ ಮಾಡಬೇಕು, ಬ್ಯಾಂಕ್ ನೊಂದಿಗೆ ಯಾವ ರೀತಿ ಒಡನಾಟ ಇಟ್ಟುಕೊಂಡು ವ್ಯವಹಾರ ಮಾಡಬೇಕು ಮತ್ತು ಬ್ಯಾಂಕ್ ಗಳು ಯಾವ ರೀತಿ ಸಹಕಾರಿಯಾಗಿದೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಮಹಿಳೆಯರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರತಿಯೊಬ್ಬರು ಸಹ ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮಲಿ ಇರುವಂತಹ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ರಾಮಕೃಷ್ಣ ಮಾನೆ ಅವರು ಆನೇಕ ಯೋಜನೆಗಳ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಗಳಿಗೆ ತಿಳಿಸಿಕೊಡಲು ಸೆಷನ್ ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ನಾಗೇಶ್ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಪಿರಿಯಾಪಟ್ಟಣದ ಶಿಶು ಸಮಗ್ರ ಅಭಿವೃದ್ಧಿ ಯೋಜನಾಧಿಕಾರಿ ಮಮತ ಹಾಗೂ ವಿವಿಧ ಬ್ಯಾಂಕ್ ಗಳ ಮ್ಯಾನೇಜರ್ ಗಳು ಮತ್ತು ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.