ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈಗ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಿರುದ್ಧವೂ ದೂರು ನೀಡಿದ್ದಾರೆ.
50:50 ನಿವೇಶನ ಪಡೆಯುವಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ, ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ.
ಅಲ್ಲದೇ ಸಿಎಂ ಸಿದ್ದರಾಮಯ್ಯ ಪ್ರಕರಣಕ್ಕೆ ಸೇರಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಕೋರ್ಟ್ನಲ್ಲಿ ವ್ಯಾಜ್ಯ ಇದ್ದ ಭೂಮಿಗೆ ಅಕ್ರಮವಾಗಿ 50:50 ಪರಿಹಾರ ಕೊಡಿಸಲಾಗಿದೆ. ಜಿ.ಟಿ ದೇವೇಗೌಡರ ಪ್ರಭಾವ ಬಳಸಿ ಚೌಡಯ್ಯ ಎಂಬವರ ಹೆಸರಿಗೆ 44,736 ಚದರ ಅಡಿ ಜಾಗದ 6 ನಿವೇಶನ ಕೊಡಿಸಿದ್ದಾರೆ. ಅದರಲ್ಲಿ ಕಿಕ್ಬ್ಯಾಕ್ ರೂಪದಲ್ಲಿ 2 ನಿವೇಶನವನ್ನು ತಮ್ಮ ಕುಟುಂಬಕ್ಕೆ ಬರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ
ವಿಜಯನಗರ ಬಡಾವಣೆ 4ನೇ ಹಂತದಲ್ಲಿ 2 ನಿವೇಶನ ಪಡೆದು ಅದನ್ನ ತಮ್ಮ ಮಗಳು ಅನ್ನಪೂರ್ಣ ಹಾಗೂ ಅಳಿಯ ವಿಶ್ವೇಶ್ವರಯ್ಯ ಹೆಸರಿಗೆ ಕ್ರಯ ಮಾಡಿಸಿದ್ದಾರೆ.
ಇದರಲ್ಲಿ ಜಿ.ಟಿ ದೇವೇಗೌಡ ಅವರ ಪ್ರಭಾವ ಇದೆ, ಆರ್ಟಿಸಿಯಲ್ಲಿ ಸರ್ಕಾರಿ ಭೂಮಿ ಎಂದಿದೆ, ಈ ವ್ಯಾಜ್ಯ ಕೋರ್ಟ್ನಲ್ಲಿ ಬಾಕಿ ಇದೆ. ಆದಾಗ್ಯೂ ಜಿಟಿಡಿ ತಮ್ಮ ಕುಟುಂಬಕ್ಕೆ 50:50 ನಿವೇಶನ ಬರೆಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಮುಡಾ ವ್ಯಾಪ್ತಿಗೆ ಭೂಮಿ ಬರದಿದ್ದರೂ, ದೇವನೂರು ಬಡಾವಣೆಗೆ ಪರಿಹಾರ ಕೊಟ್ಟಂತೆ ಮಾಡಲಾಗಿದೆ. ಇದೆಲ್ಲದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಸ್ನೇಹಮಯಿ ಕೃಷ್ಣ ಕೋರಿದ್ದಾರೆ.