ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು, ಜೆಡಿಎಸ್ ಪಕ್ಷವನ್ನು ಮುಗಿಸಬೇಕೆಂದು ಕಾಂಗ್ರೆಸ್ ಹೊಂಚು ಹಾಕುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ಅದರ ಕನಸು ಈಡೇರುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು; ನಮ್ಮದು ಸಮರ್ಥ ನಾಯಕರ, ಸಮರ್ಥ ಕಾರ್ಯಕರ್ತರ ಪಕ್ಷ. ನಮ್ಮ ಪಕ್ಷವನ್ನು ಬೇರೆಯವರು ಮುಗಿಸುವುದು ಅಸಾಧ್ಯ. ಮಾರ್ಚ್ ತಿಂಗಳಿಂದ ನಾನು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ, ಕಾರ್ಯಕರ್ತರ ಮನೆಗಳಲ್ಲಿಯೇ ವಾಸ್ತವ್ಯ ಹೂಡಿ ಪಕ್ಷ ಕಟ್ಟುತ್ತೇನೆ ಎಂದು ಕಡಕ್ಕಾಗಿ ಹೇಳಿದರು.
ಕುಮಾರಸ್ವಾಮಿ ಅವರನ್ನು ಮುಗಿಸಿದರೆ ಜೆಡಿಎಸ್ ಮುಗಿದು ಹೋಗುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಅದಕ್ಕೆ ಕಾರಣ ಇಷ್ಟೇ… ಕುಮಾರಸ್ವಾಮಿ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರು ಬಲಿಷ್ಠವಾಗಿ ನಿಂತಿದ್ದಾರೆ. ಹೀಗಾಗಿ ಅವರನ್ನು ಮುಗಿಸುವುದು ಸಾಧ್ಯವಿಲ್ಲದ ಮಾತು ಅವರು ಹೇಳಿದರು.
ಜೆಡಿಎಸ್ ಕುಟುಂಬ ಆಧಾರಿತ ಪಕ್ಷ ಎಂದು ಕಾಂಗ್ರೆಸ್ ಹೇಳುತ್ತದೆ. ಯಾರಾದರೂ ಒಮ್ಮೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ ಅಲ್ಲಿ ಗೋಡೆಗಳ ಮೇಲೆ ನೇತು ಹಾಕಿರುವ ಫೋಟೋಗಳನ್ನು ನೋಡಿ. ಕುಟುಂಬ ಆಧಾರಿತ ಪಾರ್ಟಿ ಯಾವುದು ಎಂಬುದು ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ; ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳುವುದು ಬೇಡ. ಎಲ್ಲರೂ ಒಟ್ಟಾಗಿ ಪಕ್ಷ ವಹಿಸುವ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.