ಶ್ರೀರಂಗಪಟ್ಟಣ: ಬೆಳಿಗ್ಗೆ ಎದ್ದ ತಕ್ಷಣ ನಾವು ಭೂದೇವಿಯನ್ನು ನೆನೆಯಬೇಕು ಎಂದು
ಓಂ ಶ್ರೀನಿಕೇತನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ಪುಟ್ಟೇಗೌಡರು ತಿಳಿಸಿದರು.
ಶ್ರೀರಂಗಪಟ್ಟಣದ ಓಂ ಶ್ರೀನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸುಗ್ಗಿ ಸಂಭ್ರಮಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಅನ್ನ ನೀಡುವ ಮತ್ತು ಸಕಲ ಜೀವರಾಶಿ ಗಳಿಗೆ ಆಹಾರವನ್ನು ನೀಡುವ ಈ ಬುವಿಯನ್ನು ನೆನೆಯಬೇಕು ಎಂದು ಹೇಳಿದರು.
ನಮ್ಮ ಜನಪದರು ಎಳ್ಳು ಜೀರಿಗೆ ಬೆಳೆಯೊಳ ಭೂತಾಯ ಬೆಳಿಗ್ಗೆ ಎದ್ದೊಂದು ಘಳಿಗೆ ನೆನೆದೆನು ಎಂದು ಕೃತಜ್ಞತಾ ಸಮರ್ಪಣಾ ಭಾವನೆಯಿಂದ ನೆನೆಯುತ್ತಿದ್ದರು, ಭಾರತೀಯ ಸಂಸ್ಕೃತಿಯಲ್ಲಿ ಭೂಮಿ ಮತ್ತು ಸೂರ್ಯ ಚಂದ್ರ,ನದಿ ನೀರು ಹಾಗೂ ನಾವು ಬೆಳೆದ ಭತ್ತ, ರಾಗಿ, ಜೋಳದ ರಾಶಿಗಳಿಗೆ ಹಿಗ್ಗಿನಿಂದ ಸುಗ್ಗಿ ಪೂಜೆಯನ್ನು ನಮ್ಮ ಗ್ರಾಮೀಣ ಪ್ರದೇಶದ ಜನರು ಮಾಡುತ್ತಿದ್ದರೆಂದು ತಿಳಿಸಿದರು,
ಓಂ ಶ್ರೀ ನಿಕೇತನ ಶಾಲಾ ಆಡಳಿತಾಧಿಕಾರಿ ಆಶಾ ಲತಾ ಪುಟ್ಟೇಗೌಡರು ಸಾಂಪ್ರದಾಯಿಕವಾಗಿ ಭತ್ತದರಾಶಿಗೆ ಮತ್ತು ಸಕ್ಕರೆ ನಾಡಿನ ವಾಣಿಜ್ಯ ಬೆಳೆಯಾದ ಕಬ್ಬಿಗೆ ಪೂಜೆ ಸಲ್ಲಿಸಿ ಎಳ್ಳು ಜೀರಿಗೆ ವಿತರಣೆ ಮಾಡಿ ಸಂಭ್ರಮಿಸಿದರು.
ವಿದ್ಯಾರ್ಥಿಗಳು ಇದೇವೇಳೆ ವೀರಗಾಸೆ ಕುಣಿತ,ಮರದ ಕಾಲು ನಡಿಗೆ ಹಾಗೂ ಪೂಜಾ ಕುಣಿತಕ್ಕೆ ಹೆಜ್ಜೆಹಾಕಿ ನೃತ್ಯ ಮಾಡಿದರು.
ರೈತರ ಕೃಷಿ ಪರಿಕರಗಳಾದ ಎತ್ತಿನಗಾಡಿ, ಹುಲ್ಲಿನ ಬಣವೆ,ಮೊರ, ಕಟ್ಟೊಂದ್ರಿ, ಕುಡುಗೊಲು, ಮಚ್ಚು,ಏಕಾಸಿ,ಪೀಕಾಸಿ ಗುದ್ದಲಿ ಹಾಗೂ ಭತ್ತದ ಪಾದದ ಬಡಿಗೆ ಹೊರೆಯನ್ನು ಪರಿಚಯಿಸಲಾ ಯಿತು.
ಶಾಲಾ ಟ್ರಸ್ಟಿ ಗಳಾದ ವಿ.ನಾರಾಯಣ್,ಕೆ.ಗೋಪಲ್ ಗೌಡ, ಪ್ರಿನ್ಸಿಪಾಲ್ ಚನ್ನಕೇಶ್ವರ್, ಮುಖ್ಯ ಶಿಕ್ಷಕ ಜರ್ಲಿನ್ ಉಪಸ್ಥಿತರಿದ್ದರು.